ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

– ಸಾರಾ ಗೋವಿಂದ್, ಕವಿರಾಜ್ ಸಂತಾಪ

ಬೆಂಗಳೂರು: ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ ಎಂದು ಟ್ವೀಟ್ ಮಾಡುವ ಮೂಲಕ ನಟ ಜಗ್ಗೇಶ್ ಅವರು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಸ್ವರಭಾಸ್ಕರ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತನ್ನ ಗಾಯನವನ್ನು ನಿಲ್ಲಿಸಿದ್ದಾರೆ. ಈ ಮೂಲಕ 50ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮ ಸಿರಿಕಂಠದ ಮೂಲಕ ನಮ್ಮನ್ನು ರಂಜಿಸಿದ್ದ ಗಾನಚೇತನ ತಮ್ಮ ಗಾಯನವನ್ನು ನಿಲ್ಲಿಸಿದೆ. ಹಲವಾರು ನಟರು ಮತ್ತು ಚಿತ್ರರಂಗದವರು ಅವರಿಗೆ ಸಂತಾಪ ಸೂಚಿಸಿದ್ದಾರೆ.

ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಜಗ್ಗೇಶ್ ಗೌರವಾನ್ವಿತ ವಿದಾಯ ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆ ಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ. ನೀವು ಕಾಯಕದಲ್ಲಿ ಗಾಯಕ ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ ಭಾವನಾಜೀವಿ ಇದ್ದ. ಮದ್ರಾಸ್ ನಲ್ಲಿ ನಿಮ್ಮಜೊತೆ ಕಳೆದ ಆ ದಿನಗಳು ಮತ್ತೆ ಬರದು. ಮರೆಯಲಾಗದು. ಹೋದಿರಿ ಮತ್ತೆ ಬೇಗ ಬನ್ನಿ ಎಂದಿದ್ದಾರೆ.

ಜೊತೆಗೆ ಇನ್ನೊಂದು ಟ್ವೀಟ್ ಮಾಡಿದ್ದು, ಯಾರ ಕಣ್ಣು ತಾಕಿತು. ಇನ್ನು ಎಷ್ಟು ಸಾಧಕರು ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು. ವಿಶ್ವಶಾಂತಿ ಭಂಗಕ್ಕೆ ಕೊರೊನಾ ಹರಡಿ ಮಳ್ಳಿಯಂತ ದರಿದ್ರ ದೇಶ ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು. ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ ಸಾರಾ ಗೋವಿಂದ್ ಅವರು, ಕನ್ನಡ ಚಿತ್ರೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನ ಸುದ್ದಿ ತಿಳಿದು ದುಃಖವಾಗುತ್ತಿದೆ. ನಟನಾಗಿ ರಾಜಕುಮಾರ್ ಹೇಗೆ ಹೆಸರು ಮಾಡಿದರು ಅದೇ ರೀತಿ ಗಾಯಕರಾಗಿ ಅವರು ಸಹ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದರು. ಇವತ್ತು ನಮ್ಮನ್ನ ಆಗಲಿದ್ದಾರೆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

https://www.facebook.com/kavi.raj.376258/posts/3715760768457932

ಜೊತೆಗೆ ಕವಿರಾಜ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ನೆಟ್ ವರ್ಕ್ ಇಲ್ಲದ ಜಾಗದಲ್ಲಿದ್ದು ಬೆಳಗ್ಗೆಯಿಂದ ಡ್ರೈವಿಂಗಿನಲ್ಲಿದ್ದೆ. ದಾರಿಯಲ್ಲಿ ಮೂರು ಟಿವಿಯವರು ಎಸ್‍ಪಿಬಿ ಸಾರ್ ಬಗ್ಗೆ ಬೈಟ್ಸ್ ಕೇಳಿದರು. ಪರಿಸ್ಥಿತಿ ಗಂಭೀರವಾಗಿದೆ ಅಂತಷ್ಟೇ ಗೊತ್ತಿತ್ತು. ಅವರು ಗುಣಮುಖರಾಗಲಿ ಅಂತ ಹಾರೈಸುವ ರೀತಿಯಲ್ಲೇ ಮಾತಾಡಿದೆ. ಟಿವಿಯವರು ವಿಷಯ ಹೇಳಲಿಲ್ಲ. ಸ್ವಲ್ಪ ಹೊತ್ತಿಗೆ ಮೊದಲು ವಿಷಯ ಗೊತ್ತಾಯಿತು. ಅವರಿಲ್ಲ ಅಂತಾ ಈಗಲೂ ಒಪ್ಪಲಾಗುತ್ತಿಲ್ಲ. ಭೂಮಿ ಮೇಲೆ ಹಾಡುಗಳಿರೋವರೆಗೂ ಅವರು ಇರುತ್ತಾರೆ. ಅವರು ಅಜರಾಮರ ಎಂದು ಕಂಬನಿಮಿಡಿದಿದ್ದಾರೆ.

Comments

Leave a Reply

Your email address will not be published. Required fields are marked *