ಕದ್ದ ಬೈಕ್ ಫೇಸ್ಬುಕ್ ಮೂಲಕ ಮಾರಾಟ- ಬುಲೆಟ್‌ಗಳೇ ಇವರ ಟಾರ್ಗೆಟ್

– ಹಣ ಪಡೆದ ಬಳಿಕ ಚಾಟ್ ಡಿಲೀಟ್
– ವಶಪಡಿಸಿಕೊಂಡ 14ರ ಪೈಕಿ 10 ಬುಲೆಟ್ ಬೈಕ್

ಮುಂಬೈ: ಕದ್ದ ಬೈಕ್‍ಗಳನ್ನು ಮಾರಾಟ ಮಾಡಲು ಕಳ್ಳರು ಹೊಸ ಉಪಾಯವನ್ನು ಹುಡುಕಿಕೊಂಡಿದ್ದು, ಇಬ್ಬರು ಕಳ್ಳರು ತಾವು ಕದ್ದ ಬೆಲೆ ಬಾಳುವ ಬೈಕ್‍ಗಳನ್ನು ಕಡಿಮೆ ಬೆಲೆ ಫೇಸ್ಬುಕ್‍ನಲ್ಲಿ ಮಾರಾಟ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‍ವಾಡ್‍ನ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಇಬ್ಬರು ಆರೋಪಿಗಳ ಹಡೆಮುರಿ ಕಟ್ಟಿದ್ದಾರೆ. ಆರೋಪಿಗಳಾದ ನಾಸಿಕ್ ನಿವಾಸಿ ಹೇಮಂತ್ ರಾಜೇಂದ್ರ ಭದಾನೆ(24) ಹಾಗೂ ಧುಲೆ ಜಿಲ್ಲೆಯ ಯೋಗೇಶ್ ಸುನಿಲ್ ಭಾಮ್ರೆ(24)ರನ್ನು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಆರೋಪಿ ಭದಾನೆ ಮುಂಬೈ ಹಾಗೂ ಪಿಂಪ್ರಿ-ಚಿಂಚ್ವಾಡ್ ಸೇರಿದಂತೆ ವಿವಿಧ ಪ್ರದೇಶಗಳಿಂದ ಬೈಕ್‍ಗಳನ್ನು ಕದಿಯುತ್ತಿದ್ದ. ಕಳವು ಮಾಡಿದ ಬೈಕ್‍ಗಳನ್ನು ಭಾಮ್ರೆ ಸಹಾಯದಿಂದ ಮಹಾರಾಷ್ಟ್ರದ ಬೀದ್, ಧುಲೆ ಹಾಗೂ ಅಹ್ಮದ್‍ನಗರ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು.

ಬೈಕ್ ಮೇಲಿನ ಫೈನಾನ್ಸ್ ಸಾಲವನ್ನು ತೀರಿಸದ್ದಕ್ಕೆ ಬೈಕ್‍ಗಳನ್ನು ಸೀಜ್ ಮಾಡಿದ್ದೇವೆ. ಅದೇ ವಾಹನಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಗ್ರಾಹಕರಿಗೆ ಈ ಖದೀಮರು ಯಾಮಾರಿಸುತ್ತಿದ್ದರು. ಅಲ್ಲದೆ ಓರಿಜಿನಲ್ ದಾಖಲೆಗಳನ್ನು ಕೊಡುವುದಾಗಿ ಸಹ ಕಳ್ಳರು ಭರವಸೆ ನೀಡುತ್ತಿದ್ದರು. ಆದರೆ ದಾಖಲೆಗಳನ್ನು ನೀಡುತ್ತಿರಲಿಲ್ಲ.

ಆರೋಪಿಗಳಿಂದ ಪೊಲೀಸರು ಕನಿಷ್ಟ 14 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 10 ಬುಲೆಟ್ ಬೈಕ್ ಸಹ ಇವೆ. ಬಧಾನೆ ಹಳೇಯ ಅಪರಾಧಿಯಾಗಿದ್ದು, ಥೇನ್ ಹಾಗೂ ನಾಸಿಕ್‍ನಲ್ಲೇ ಈತನ ಮೇಲೆ 37 ಪ್ರಕರಣಗಳಿವೆ. ಆರೋಪಿಗಳು ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು. ಬೈಕ್ ಮಾರಿ, ಹಣ ಪಡೆದ ಬಳಿಕ ಆರೋಪಿಗಳು ಅವರೊಂದಿಗೆ ಸಂವಹನ ನಡೆಸಿದ ಚಾಟ್‍ಗಳನ್ನು ಡಿಲೀಟ್ ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *