ಬೆಂಗಳೂರಿನ ನೈಟ್ ಲೈಫ್‌ನ ಹಾಟ್ ಸ್ಪಾಟ್ ‘ಹೌಸ್‌ ಆಫ್‌ ಲೈಫ್‌ʼ – ಯಾವೆಲ್ಲ ಪಾರ್ಟಿ ನಡೆಯುತ್ತಿತ್ತು?

– 4 ಎಕ್ರೆ ಜಾಗದಲ್ಲಿದೆ ಆದಿತ್ಯ ಆಳ್ವಾನ ರೆಸಾರ್ಟ್‌
– ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಪರಾರಿ

ಬೆಂಗಳೂರು: ಡ್ರಗ್ಸ್ ಪ್ರಕರಣ ಬಂದಾಗ ಸ್ಯಾಂಡಲ್‍ವುಡ್ ಕಲಾವಿದರು, ಶ್ರೀಮಂತರ ಮಕ್ಕಳು, ರಾಜಕಾರಣಿಗಳ ಮಕ್ಕಳು ಬೆಂಗಳೂರಿನ ರೆಸಾರ್ಟ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಲಾಕ್‌ಡೌನ್‌ ಸಮಯದಲ್ಲೂ ಪಾರ್ಟಿ ಜೋರಾಗಿ ನಡೆಯುತ್ತಿತ್ತು. ಆದರೆ ಬೆಂಗಳೂರಿನ ಯಾವ ರೆಸಾರ್ಟ್‌ನಲ್ಲಿ ಈ ರೀತಿಯ ಪಾರ್ಟಿ ನಡೆಯುತ್ತಿತ್ತು ಎಂಬ ವಿಚಾರ ಅಧಿಕೃತವಾಗಿ ಸಿಕ್ಕಿರಲಿಲ್ಲ. ಆದರೆ ಈಗ ಸಿಸಿಬಿ ಪೊಲೀಸರು ಪ್ರಕರಣದ 6ನೇ ಆರೋಪಿಯಾಗಿರುವ ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ದಾಳಿ ಮಾಡುವ ಮೂಲಕ ಮತ್ತಷ್ಟು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿರುವ ಮಾಜಿ ಸಚಿವ ದಿ. ಜೀವರಾಜ್‌ ಆಳ್ವಾ ಪುತ್ರ ಆದಿತ್ಯ ಆಳ್ವಾ ಹೆಬ್ಬಾಳದಲ್ಲಿ ‘ಹೌಸ್‌ ಆಫ್‌ ಲೈಫ್‌’ಹೆಸರಿನಲ್ಲಿ ರೆಸಾರ್ಟ್‌ ತೆರೆದಿದ್ದ. ಬರೋಬ್ಬರಿ 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ಸುಂದರವಾರ ರೆಸಾರ್ಟ್‌ ತೆರೆಯಲಾಗಿದೆ. ಈ ಜಾಗದಲ್ಲಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲೂ ಪಾರ್ಟಿ ನಡೆದಿತ್ತು.

ಇಲ್ಲಿ ಮದುವೆ, ಖಾಸಗಿ ಕಾರ್ಯಕ್ರಮ, ಹಬ್ಬ ಮಾತ್ರವಲ್ಲದೇ 4 ಎಕ್ರೆ ಜಾಗದಲ್ಲಿ ಫ್ಯಾಶನ್ ಶೋ ನಡೆಸಲು ಅವಕಾಶವಿತ್ತು. ಆದರೆ ಇಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳ ನೈಟ್ ಲೈಫ್ ಪಾರ್ಟಿ ನಡೆಯುತ್ತಿತ್ತು. ಇದನ್ನೂ ಓದಿ: ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು

ಈ ಪಾರ್ಟಿಗೆ ಬಾಲಿವುಡ್ ಸ್ಯಾಂಡಲ್‌ವುಡ್ ಸ್ಟಾರ್ಸ್ ಗಳನ್ನು ಕೂಡ ಕರೆಯಲಾಗುತ್ತಿತ್ತು. ಇತ್ತೀಚೆಗೆ ಹೋಳಿ ಸೇರಿದಂತೆ ಹೊಸ ವರ್ಷದ ಪಾರ್ಟಿ, ಪ್ರೇಮಿಗಳ ದಿನಾಚರಣೆ ಕೂಡ ನಡೆಸಲಾಗಿತ್ತು. ಇಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಡಿಜೆಗಳನ್ನು ಕರೆಸಲಾಗುತ್ತಿತ್ತು. ಡಿಜೆಗಳನ್ನು ಇಲ್ಲಿ ಕರೆಸಿ ಮತ್ತಿನ ಲೋಕದಲ್ಲಿ ತೇಲಿಸಲಾಗುತ್ತಿತ್ತು. ಇದರ ಜೊತೆಗೆ ಲಲನೆಯೆ ಫ್ಯಾಶನ್‌ ಶೋ ಸಹ ಆಯೋಜಿಸಲಾಗುತ್ತಿತ್ತು.

‘ಟೆಕ್ನೋ ಪಾರ್ಟಿʼ ಹೆಸರಲ್ಲಿ ಇಲ್ಲಿ ದೊಡ್ಡ ಮಟ್ಟದ ಈವೆಂಟ್ ನಡೆಯುತ್ತಿತ್ತು. ವಿವಿಐಪಿಗಳಿಗೆ ಪ್ರತ್ಯೇಕವಾಗಿರುವ ಟೇಬಲ್ ಬುಕ್ಕಿಂಗ್ ವ್ಯವಸ್ಥೆ ಇರುತ್ತಿತ್ತು. ಹೌಸ್‌ ಆಫ್‌ ಲೈಫ್‌ ವೆಬ್‌ಸೈಟ್‌ನಲ್ಲೂ ಬೆಂಗಳೂರಿನ ನೈಟ್‌ ಲೈಫ್‌ ಪಾರ್ಟಿಗೆ ಈ ಜಾಗ ಹೇಳಿ ಮಾಡಿಸಿದಂತಿದೆ ಎಂದು ವಿಶೇಷವಾಗಿ ಬರೆಯಲಾಗಿದೆ.

ಸ್ಯಾಂಡಲ್‌ವುಡ್‌ ಕಲಾವಿದರು ಇಲ್ಲಿ ಕನ್ನಡ ಕಿರುತೆರೆಯ ಕಲಾವಿದರು ಈ ರೆಸಾರ್ಟ್‌ಗೆ ಆಗಮಿಸುತ್ತಿದ್ದರು. ರಾತ್ರಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಕೆಲವೇ ಮಾದಿಗೆ ಮಾತ್ರ ಆಹ್ವಾನ ನೀಡಲಾಗುತ್ತಿತ್ತು. ತಡರಾತ್ರಿ ನಡೆಯುತ್ತಿದ್ದ ಈ ಮೋಜು ಮಸ್ತಿಯ ಪಾರ್ಟಿಯಲ್ಲಿ ಏನು ಇರುತ್ತಿತ್ತು ಎಂಬುದರ ಬಗ್ಗೆ ಈಗ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಿಸಿ ಕ್ಯಾಮೆರಾಗಳ ಡಿವಿಆರ್ ಹಾಗೂ ಮ್ಯಾನೇಜರ್ ರಾಮದಾಸ್ ಜೊತೆ ಸಿಬ್ಬಂದಿಯನ್ನು ವಶಕ್ಕೆ ಪಡೆದು ಮಾಹಿತಿ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಭಾಗಿಯಾದವರ ಕಾಂಟ್ಯಾಕ್ಟ್ ಲಿಸ್ಟ್ ತಯಾರು ಮಾಡುತ್ತಿದ್ದಾರೆ. ಈಗ ಭಾಗಿಯಾದವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ ಮಾಡಲು ಕಾರಣ ಏನು? ಆರೋಪಿಗಳು ಹೇಳಿದ್ದು ಏನು?

ಮಾಜಿ ಸಚಿವರಾಗಿದ್ದ ಜೀವರಾಜ್‌ ಆಳ್ವಾ ಅವರು ಎಕ್ರೆಗೆ 6 ಲಕ್ಷ ರೂ. ನೀಡಿ ಈ ಜಾಗವನ್ನು ಖರೀದಿಸಿ ಫಾರಂ ಹೌಸ್‌ ಮಾಡಲು ಮುಂದಾಗಿದ್ದರು. ಆದರೆ ಆದಿತ್ಯ ಆಳ್ವಾ ಈ ಜಾಗವವನ್ನು ರೆಸಾರ್ಟ್‌ ಮಾಡಿಕೊಂಡಿದ್ದ. ಸದ್ಯ ಈ ಜಾಗ 300 ಕೋಟಿ ರೂ. ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.

Comments

Leave a Reply

Your email address will not be published. Required fields are marked *