ಅನ್‍ಲಾಕ್ ಬಳಿಕ ಮೊದಲ ವೀಕೆಂಡ್, ಪ್ರವಾಸಿಗರಿಂದ ತುಂಬಿ ತುಳುಕಿದ ನಂದಿಬೆಟ್ಟ- ಫುಲ್ ಟ್ರಾಫಿಕ್

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನ್‍ಲಾಕ್ ನಿಯಮ ಜಾರಿ ಬಳಿಕ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ.

ಲಾಕ್‍ಡೌನ್ ವೇಳೆ ಪ್ರಶಾಂತವಾಗಿದ್ದ ನಂದಿ ಬೆಟ್ಟ ಇದೀಗ ಅನ್‍ಲಾಕ್ ರೂಲ್ಸ್ ಜಾರಿ ಬಳಿಕ ಗಿಜುಗುಡುತ್ತಿದೆ. ಅದ್ರಲ್ಲೂ ನಂದಿಬೆಟ್ಟ ಅನ್‍ಲಾಕ್ ಆದ ನಂತರ ಮೊದಲ ವೀಕೆಂಡ್ ದಿನವಾದ ಭಾನುವಾರದಂದು ಜನಜಂಗುಳಿಯಿಂದ ಕೂಡಿತ್ತು. ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು.

ಮಾರ್ಚ್ 14ರಿಂದ ಲಾಕ್‍ಡೌನ್ ಆಗಿದ್ದ ನಂದಿಗಿರಿಧಾಮ ಬರೋಬ್ಬರಿ ಐದು ತಿಂಗಳ ನಂತರ ಕಳೆದ ಸೋಮವಾರ ಅನ್‍ಲಾಕ್ ಆಗಿದೆ, ಸೋಮವಾರದಿಂದ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ವಿಕೇಂಡ್ ದಿನದಂದು ಸಾವಿರಾರು ಮಂದಿ ನಂದಿಗಿರಿಧಾಮಕ್ಕೆ ಆಗಮಿಸಿ ಬೆಟ್ಟದ ಅನನ್ಯ ಪ್ರಾಕೃತಿಕ ಸೌಂದರ್ಯದ ಸೊಬಗನ್ನ ಸವಿದರು.

ಮುಂಜಾನೆಯಿಂದಲೇ ಕಾರು, ಬೈಕ್ ಗಳಲ್ಲಿ ಬಂದ ಪ್ರವಾಸಿಗರು, ನಂದಿಬೆಟ್ಟದ ತಪ್ಪಲಿನಲ್ಲಿ ಜಮಾಯಿಸಿದ್ದರು. ಬೆಳಗ್ಗೆ 8 ಗಂಟೆಗೆ ನಂದಿಬೆಟ್ಟ ಪ್ರವೇಶದ್ವಾರದ ಚೆಕ್ ಪೋಸ್ಟ್ ತೆರದಿದ್ದೇ ತಡ ನಾ ಮುಂದು ತಾ ಮುಂದು ಎಂದು ಅಂಕುಡೊಂಕಿನ ರಸ್ತೆಯಲ್ಲಿ ನಂದಿಗಿರಿಧಾಮ ಪ್ರವೇಶ ಮಾಡಿದರು.

ಬೆಟ್ಟದಲ್ಲಿ ಮೋಡ ಮುಸುಕಿದ ವಾತಾವರಣ ಹನಿ ಹನಿ ಮಳೆ ಸಿಂಚನಗಳ ನಡುವೆ ಬೆಳ್ಳಿ ಮೋಡಗಳ ಮುತ್ತಿನಾಟ ಕಂಡು ಪ್ರವಾಸಿಗರು ಪುಳುಕಿತರಾದರು. ಪ್ರೇಮಿಗಳ ಪಾಲಿಗೆ ಇದೊಂದು ಪ್ರೇಮಧಾಮವಾಗಿದ್ದು, ಸೆಲ್ಪಿ, ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡಿದರು. ವಾಹನಗಳ ದಟ್ಟಣೆಯಿಂದ ಕೆಲ ಸಮಯ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಲಾಕ್‍ಡೌನ್ ವೇಳೆ ಮನೆಯಲ್ಲೇ ಕಾಲ ಕಳೆದಿದ್ದ ಯುವ ಸಮೂಹ ಅನ್‍ಲಾಕ್ ಆಗುತ್ತಿದ್ದಂತೆ ಗಿರಿಧಾಮದ ಹಚ್ಚಹಸುರಿನ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡಿತು. ಪ್ರವಾಸಿಗರು ಸಖತ್ ಖುಷಿಪಟ್ಟರು.

Comments

Leave a Reply

Your email address will not be published. Required fields are marked *