ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೊನಾ ಗೆದ್ದ 105 ವರ್ಷದ ಅಜ್ಜಿ

ಕೊಪ್ಪಳ: ಕೊರೊನಾ ಹಾಟ್‍ಸ್ಪಾಟ್ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‍ಗೆ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆ 105 ವರ್ಷದ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೊನಾ ಗೆದ್ದಿದ್ದಾರೆ.

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷ ಭರ್ತಿಯಾಗಿರುವ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಕೊರೊನಾದಿಂದ ಗುಣಮುಖವಾಗಿದ್ದಾರೆ. ಕಳೆದ ವಾರವಷ್ಟೇ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್ ಐಸೋಲೇಶನ್ ಆಗಿ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಜ್ವರ ಸೇರಿದಂತೆ ಇತರೆ ತೊಂದರೆಯನ್ನು ಅನುಭವಿಸುತ್ತಿದ್ದರು. ಕೋವಿಡ್ ಟೆಸ್ಟ್ ವೇಳೆ ಇವರಿಗೆ ಪಾಸಿಟಿವ್ ಬಂದಿತ್ತು. ಉಳಿದಂತೆ ಯಾವುದೇ ತೊಂದರೆ ಇರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಯಿತು. ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಈಗ ಸಂಪೂರ್ಣ ಗುಣಮುಖವಾಗುತ್ತಿದ್ದು, ಮತ್ತೊಮ್ಮೆ ಕೊರೊನಾ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ.

ಅಜ್ಜಿಗೆ ಚಿಕಿತ್ಸೆ ನೀಡಿದ ಮೊಮ್ಮಗ ಡಾ.ಶ್ರೀನಿವಾಸ ಹ್ಯಾಟಿ ಈ ಕುರಿತು ವಿವರಿಸಿ, ಬೇರೆ ಯಾವುದೇ ಖಾಯಿಲೆಗಳು ಇರದೇ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಯಿತು. ಅಲ್ಲದೆ ಕಮಲಮ್ಮನವರು ಸಹ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದು ವಿವರಿಸಿದರು.

Comments

Leave a Reply

Your email address will not be published. Required fields are marked *