ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

ಗಂಟೆ ಕಳೆಯೋದರೊಳಗೆ ದಾಖಲೆಯ ವೀಕ್ಷಣೆ!

ಬಜಾರ್ ಖ್ಯಾತಿಯ ಧನ್ವೀರ್ ನಟನೆಯ ಬಂಪರ್ ಚಿತ್ರ ವರ್ಷದ ಹಿಂದೆಯೇ ಸಾಕಷ್ಟು ಸದ್ದು ಮಾಡಿದೆ. ಮೊದಲ ಚಿತ್ರದಲ್ಲಿಯೇ ಮಾಸ್ ಲುಕ್ಕಲ್ಲಿ ಮಿಂಚಿದ್ದ ಧನ್ವೀರ್ ಬಂಪರ್ ಮೂಲಕ ಮತ್ತೊಂದು ಭರ್ಜರಿ ಗೆಟಪ್ಪಿನಲ್ಲಿ ಎಂಟ್ರಿ ಕೊಡುತ್ತಿರೋ ವಿಚಾರವೂ ಈ ಟೈಟಲ್ ಮೂಲಕವೇ ಸ್ಪಷ್ಟವಾಗಿತ್ತು. ಖ್ಯಾತ ಯುವ ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರದ ಮತ್ತಷ್ಟು ಚಿತ್ರಣವೀಗ ಜಾಹೀರುಗೊಂಡಿದೆ. ನಾಯಕ ಧನ್ವೀರ್ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಚಿತ್ರತಂಡ ಪರಿಣಾಮಕಾರಿಯಾದ ಟೀಸರ್ ಒಂದನ್ನು ಲಾಂಚ್ ಮಾಡಿದೆ. ಈ ಮೂಲಕ ಹೆಸರಿಗೆ ತಕ್ಕುದಾದ ಕಂಟೆಂಟಿನ ಸಿನಿಮಾ ನೋಡೋ ಭಾಗ್ಯ ಪ್ರೇಕ್ಷಕರಿಗೆ ಸಿಗಲಿರೋದು ಪಕ್ಕಾ ಆಗಿದೆ.

ಇದು ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರ. ಇದರ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡಿರೋ ವೀಕ್ಷಣೆ, ಅದರೊಂದಿಗೆ ಸೃಷ್ಟಿಯಾಗಿರೋ ಕ್ರೇಜ್, ಸಿಕ್ಕಿರೋ ಅಪಾರ ಪ್ರಮಾಣದ ಪ್ರತಿಕ್ರಿಯೆಗಳೆಲ್ಲವೂ ಧನ್ವೀರ್ ಪಾಲಿಗೆ ಈ ಹುಟ್ಟುಹಬ್ಬದ ಸಂಭ್ರಮವನ್ನ ಇಮ್ಮಡಿಸಿದೆ. ಅದರಾಚೆ ನಿಂತು ನೋಡಿದರೂ ಬಂಪರ್ ಟೀಸರ್‍ನದ್ದು ಭರವಸೆ ಮೂಡಿಸುವಂಥಾ ಖದರ್. ಧನ್ವೀರ್ ಮೇಲೆ ಮೊದಲ ಚಿತ್ರದಲ್ಲಿ ಎಂಥಾ ನಿರೀಕ್ಷೆ ಮೊಳೆತುಕೊಂಡಿತ್ತೋ ಅದನ್ನು ಮೀರಿಸುವಂಥ ರಗಡ್ ಕಥಾನಕದ ಹೊಳಹು ಸಲೀಸಾಗಿ ಸಿಕ್ಕಂತಾಗಿದೆ.

ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಮಾಸ್ ಹೀರೋ ಆಗಿ ಅವತರಿಸಿದ್ದವರು. ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿದ್ದ ಧನ್ವೀರ್‍ಗೆ ಒಂದೇ ಒಂದು ಸಿನಿಮಾ ಮೂಲಕ ಕುದುರಿಕೊಂಡಿರೋ ಅಭಿಮಾನಿ ಬಳಗ ನಿಜಕ್ಕೂ ಬೆರಗಾಗುವಂತಿದೆ. ಅಂಥಾ ಅಭಿಮಾನಿಗಳೆಲ್ಲ ಧನ್ವೀರ್ ಅವರನ್ನು ಮತ್ತಷ್ಟು ರಿಗಡ್ ಲುಕ್ಕಿನಲ್ಲಿ ನೋಡಲು ಕಾತರಿಸಿದ್ದರು. ಅದನ್ನು ಸಂಪೂರ್ಣವಾಗಿ ತಣಿಸುವಂಥ ಗೆಟಪ್ಪಿನಲ್ಲಿ ಧನ್ವೀರ್ ಕಂಗೊಳಿಸಿದ್ದಾರೆ. ಮಾಸ್ ಮಾತ್ರವಲ್ಲದೆ ಸಖತ್ ಸ್ಟೈಲಿಶ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷವೇ ಧನ್ವೀರ್ ಹುಟ್ಟುಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದರು. ಆ ದೆಸೆಯಿಂದಲೇ ಭಾರೀ ಸೌಂಡು ಮಾಡಿದ್ದ ಬಂಪರ್ ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆಲ್ಲ ಬಿಡುಗಡೆಯಾಗಿರುತ್ತಿತ್ತೇನೋ. ಆದರೆ, ಕೊರೊನಾದಿಂದ ಕೊಂಚ ಹಿನ್ನಡೆಯಾದರೂ ಬಂಪರ್ ಅನ್ನು ಮಜಬೂತಾಗಿಯೇ ಸಿದ್ಧಗೊಳಿಸಲಾಗಿದೆ. ಅದಕ್ಕೆ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟೀಸರ್‍ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.

Comments

Leave a Reply

Your email address will not be published. Required fields are marked *