ಧಾರಾಕಾರ ಮಳೆ – ಮನೆ, ಅಂಗಡಿ, ವಸತಿಗೃಹಗಳಿಗೆ ನುಗ್ಗಿದ ನೀರು

ಹುಬ್ಬಳ್ಳಿ/ಬೆಳಗಾವಿ: ರಾಜ್ಯದಲ್ಲಿ ವರುಣನ ಅಬ್ಬರ ಮತ್ತೆ ಶುರುವಾಗಿದ್ದು, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.

ಭಾನುವಾರ ಮಧ್ಯರಾತ್ರಿ ಹುಬ್ಬಳ್ಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ನಗರದ ಹಲವು ತಗ್ಗು ಪ್ರದೇಶದ ಅಂಗಡಿ ಮತ್ತು ಮನೆಗಳಿಗೆ ಮಳೆ ನೀರು ನುಗ್ಗಿದೆ. ಪಾಲಿಕೆಯ ನಿರ್ಲಕ್ಷ್ಯದಿಂದ ಚರಂಡಿ ನೀರು ಹಾಗೂ ಮಳೆ ನೀರು ನುಗ್ಗಿದ ಪರಿಣಾಮ ನಗರದ ಕಾಟನ್ ಮಾರ್ಕೇಟಿನ ಹಲವು ಅಂಗಡಿಗಳು ನೀರಿನಿಂದ ಜಲಾವೃತಗೊಂಡಿವೆ.

ಹೊಟೇಲ್‍ನ ಮಾಲೀಕರು ಇದೀಗ ಕಷ್ಟ ಅನುಭವಿಸುವಂತಾಗಿದೆ. ಚರಂಡಿ ದುರಸ್ತಿ ಮಾಡಿಸಿ ಅಂತ ಈ ಭಾಗದ ವ್ಯಾಪಾರಸ್ಥರು ಪಾಲಿಕೆಗೆ ಮನವಿ ಮಾಡಿದ್ದರು. ಆದರೆ ಮಹಾನಗರ ಪಾಲಿಕೆ ಮಾತ್ರ ಅವರಿ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ವರುಣನ ಆರ್ಭಟದಿಂದ ಚರಂಡಿ ನೀರು ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದೆ.

ಇತ್ತ ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕರ ವಸತಿ ಗೃಹಗಳಿಗೆ ನೀರು ನುಗ್ಗಿದೆ. ಶಿಥಿಲಾವಸ್ಥೆಯಲ್ಲಿದ್ದ ವಸತಿಗೃಹಗಳಿಗೆ ನೀರು ನುಗ್ಗಿದ್ದರಿಂದ ಸಿಬ್ಬಂದಿ ನೀರನ್ನು ಹೊರಹಾಕಲು ಹರಸಾಹಸ ಮಾಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಕೆರೆ ಕೂಡ ಭರ್ತಿಯಾಗಿದೆ. ಅಷ್ಟೇ ಅಲ್ಲದೇ ಉಗರಗೋಳ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ.

Comments

Leave a Reply

Your email address will not be published. Required fields are marked *