ಶಿಕ್ಷಕರಿಗೆ 60 ಸಾವಿರ ಸಹಾಯ ಧನ ನೀಡಿದ ವಿದ್ಯಾರ್ಥಿಗಳು

– ಗುರು ದಕ್ಷಿಣೆ ನೀಡಿ, ಶಿಕ್ಷಕರ ದಿನ ಆಚರಣೆ

ಚಿಕ್ಕಮಗಳೂರು: ತಾವು ಓದಿ ಬೆಳೆದು, ಉನ್ನತ ಹುದ್ದೆಯನ್ನೇರಿದ ವಿದ್ಯಾರ್ಥಿಗಳು ತಮ್ಮ ಗುರು ವೃಂದ ಸಂಕಷ್ಟದಲ್ಲಿದೆ ಎಂಬುದನ್ನು ಅರಿತು ಹಳೆ ವಿದ್ಯಾರ್ಥಿಗಳು ಶಿಕ್ಷಕ ದಿನಾಚರಣೆಯ ಅಂಗವಾಗಿ 20 ಶಿಕ್ಷಕರಿಗೆ ತಲಾ ಮೂರು ಸಾವಿರದಂತೆ 60 ಸಾವಿರ ರೂ. ಹಣ ನೀಡಿದ್ದಾರೆ. ಈ ಮೂಲಕ ಅರ್ಥಪೂರ್ಣವಾಗಿ ಶಿಕ್ಷಕರ ದಿನವನ್ನು ಆಚರಿಸಿದ್ದಾರೆ.

ಜಿಲ್ಲೆಯ ಕಡೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲಿನ ಹಳೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಕೊರೊನಾ ಕಾಲದಲ್ಲಿ ಕಳೆದ ಐದಾರು ತಿಂಗಳಿಂದ ಖಾಸಗಿ ಶಾಲೆಯ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದರು. ಶಾಲಾ ಆಡಳಿತ ಮಂಡಳಿ ಕೂಡ ಸಂಬಳ ನೀಡಲಾಗದೆ ಶಿಕ್ಷಕರಿಗೆ ಅರ್ಧ ಸಂಬಳ ನೀಡಿತ್ತು. ಹೀಗಾಗಿ ಹಳೆ ವಿದ್ಯಾರ್ಥಿಗಳು ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ.

ಈ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಅಮೆರಿಕಾ, ಜರ್ಮನಿಯಲ್ಲಿದ್ದಾರೆ. ಕೆಲವರು ವೈದ್ಯರು, ಇಂಜಿನಿಯರ್ ಆಗಿದ್ದಾರೆ. ಇನ್ನೂ ಹಲವರು ವಿವಿಧ ರೀತಿಯ ಉದ್ಯೋಗದಲ್ಲಿದ್ದು, ಆರ್ಥಿಕವಾಗಿ ಸದೃಢವಾಗಿದ್ದಾರೆ. ಉತ್ತಮ ಸ್ಥಾನದಲ್ಲಿರುವ ಸುಮಾರು 30 ವಿದ್ಯಾರ್ಥಿಗಳು ಹಣ ಹಾಕಿ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಇದೇ ವೇಳೆ ಶಾಲೆಯ ಬೋಧಕೇತರ ವರ್ಗದ 18 ಜನರಿಗೂ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಯ ಕಿಟ್ ವಿತರಿಸಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಹಾಗೂ ಗೌರವವನ್ನು ಆಡಳಿತ ಮಂಡಳಿ, ಶಿಕ್ಷಕ ವೃಂದ ಶ್ಲಾಘಿಸಿದೆ.

Comments

Leave a Reply

Your email address will not be published. Required fields are marked *