ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಹಶೀಲ್ದಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿಜಯಕುಮಾರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.
ಮರಳು ಲಾರಿಗೆ ಅನುಮತಿ ನೀಡುವ ಸಲುವಾಗಿ ತಾಲೂಕು ತಹಶೀಲ್ದಾರ್ ವಿಜಯಕುಮಾರ್ ಲಂಚ ಕೇಳಿದ್ದರು. ತಹಶೀಲ್ದಾರ್ ಲಂಚ ಕೇಳಿದ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಳೆದ 20 ದಿನಗಳ ಹಿಂದೆ ಹೂವಿನ ಹಡಗಲಿ ತಾಲೂಕಿನ ಉಮೇಶ್ ನಾಯಕ್ ಎಂಬವರ ಮರಳು ಲಾರಿಯನ್ನು ಸೀಜ್ ಮಾಡಲಾಗಿತ್ತು. ಮರಳು ಲಾರಿ ಬಿಡುವ ಸಲುವಾಗಿ ಉಮೇಶ್ ನಾಯಕ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ನನ್ನದು ವಾರದ ಲೆಕ್ಕ ಇಲ್ಲ, ನನ್ನ ಜೊತೆಯಲ್ಲಿ ಮಾತನಾಡಬೇಡಿ. 50-50 ಆದರೂ ಕೊಡುತ್ತೀರಾ ಎಂದು ಬೇಡಿಕೆ ಇಟ್ಟಿದ್ದರು. ತಹಶೀಲ್ದಾರ್ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಅವರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ತಹಶೀಲ್ದಾರನ್ನು ಅಮಾನತು ಮಾಡುವಂತೆ ಒತ್ತಾಯ ಮಾಡಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ವಿಜಯಕುಮಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.


Leave a Reply