ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ – ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ

ಹಾಸನ: ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದ್ದು, ಆ ಮೂಲವನ್ನು ಬೈಯ್ಯಲು ಹೋದರೆ ಯಾರ್ಯಾರಿಗೋ ಬೇಜಾರಾಗುತ್ತೆ ಎಂದು ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅರಸೀಕೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡ್ರಗ್ಸ್ ದಂಧೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲಾ ದೇಶದಲ್ಲೂ ಡ್ರಗ್ಸ್ ಇದೆ. ನಮ್ಮ ಭಾರತದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಕೆಟ್ಟದ್ದು ಎಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಯಾವುದೇ ಬೀಚ್‍ಗೆ ಹೋಗಿ ಅಲ್ಲಿ ಕುಡಿದು ಮಲಗಿರುವವರೆಲ್ಲಾ ಡ್ರಗ್ಸ್ ತೆಗೆದುಕೊಂಡು ಮಲಗಿರುತ್ತಾರೆ. ಎಲ್ಲಿ ಲಾಭವಿದೆ ಅಲ್ಲಿ ಅದಕ್ಕೆ ಬಿಸಿನೆಸ್‍ದಾರರು ಹುಟ್ಟಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಈ ದೇಶ, ರಾಜ್ಯದಲ್ಲಿ ಡ್ರಗ್ಸ್ ಅಡಿಕ್ಟ್ ಆಗಿದೆ ಎಂದರು.

ಈ ಬಗ್ಗೆ ವಿಧಾನಸೌಧದಲ್ಲಿ ಈ ಹಿಂದೆ 3-4 ಗಂಟೆಗಳ ಕಾಲ ಚರ್ಚೆಯಾಗಿತ್ತು. ಆಗಲೇ ನಾನು ಡ್ರಗ್ಸ್ ಬಗ್ಗೆ ವಿರೋಧ ಮಾಡಿದ್ದೆ. ಈ ಹಿಂದೆ ಶಾಸಕ ಕಳಕಪ್ಪ ಬಂಡಿ, ನನ್ನ ಮಗ ಎಂಬಿಬಿಎಸ್ ಓದುತ್ತಿದ್ದಾನೆ ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾನೆ. ನನ್ನ ಮಗನನ್ನ ಉಳಿಸಿಕೊಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು. ಅಂದೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಈಗ ನಿಯಂತ್ರಣಕ್ಕೆ ತರಬಹುದಿತ್ತು. ಈಗಲಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಎಂಬಿಬಿಎಸ್ ಮತ್ತು ಪಿಜಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಯಾರ ಕೈಯಲ್ಲಿದ್ದಾರೆ. ಇದೆಲ್ಲವೂ ಸರ್ಕಾರಕ್ಕೆ ಗೊತ್ತಿಲ್ಲವೇ. ಅದರ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ. ಆ ಮೂಲವನ್ನ ಬೈಯ್ಯಲು ಹೋದರೆ ಯಾರಿಗಾದರೂ ಬೇಜಾರಾಗುತ್ತೆ. ಯಾರೋ ನಾಲ್ಕು ಜನ ಆರ್ಥಿಕವಾಗಿ ಮುಂದುವರಿಯಲು ಯುವಕರನ್ನ ಹಾಳು ಮಾಡುವ ಕೆಟ್ಟ ಪ್ರವೃತ್ತಿ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *