ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಪ್ಲಾನ್ ಏನು: ಡಿಕೆಶಿ ಪ್ರಶ್ನೆ

ಬೆಂಗಳೂರು: ನಮ್ಮ ಬದುಕು ಬದಲಾಯಿಸಿದ ಶಿಕ್ಷಕರಿಗೆ ಇಂದು ಕೃತಜ್ಞತೆ ಸಲ್ಲಿಸುವ ದಿನ. ಅಲ್ಲದೆ ದಾರಿ ತೋರಿರುವ ಗುರುವನ್ನು ಸ್ಮರಿಸಿಕೊಳ್ಳುವ ದಿನ ಇಂದಾಗಿದೆ. ಇಂದು ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಶಿಕ್ಷಕರ ದಿನಾಚರಣೆಯಂದೇ ಸರಣಿ ಟ್ವೀಟ್ ಮಾಡಿರುವ ಡಿಕೆಶಿ, ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಖಾಸಗಿ ಶಾಲೆಗಳ 40,000ಕ್ಕೂ ಹೆಚ್ಚು ಶಿಕ್ಷಕರು ಕೆಲಸ ಕಳೆದುಕೊಂಡಿರುವಾಗ, 2,00,000ಕ್ಕೂ ಹೆಚ್ಚು ಶಿಕ್ಷಕರಿಗೆ ಸಂಬಳವಿಲ್ಲದೇ ಒದ್ದಾಡುತ್ತಿರುವಾಗ, ಮಕ್ಕಳ ಭವಿಷ್ಯ ರೂಪಿಸುವವರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸ ಮಾಡುವಾಗ ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಪ್ಲಾನ್ ಏನು ಎಂದು ಪ್ರಶ್ನಿಸಿ ಶಿಕ್ಷಕರಿಗೆ ಶಿಕ್ಷೆ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಬರೆದುಕೊಂಡಿದ್ದಾರೆ.

ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.62.5ರಷ್ಟು ಮಕ್ಕಳಿಗೆ ಮಾತ್ರ ಸ್ಮಾರ್ಟ್ ಫೋನ್, ಲ್ಯಾಪ್‍ಟಾಪ್‍ನ ಲಭ್ಯತೆ ಇದೆ. ಶೇ.53.75ರಷ್ಟು ಮಕ್ಕಳಿಗೆ ಮಾತ್ರ ಇಂಟರ್ನೆಟ್ ಸಂಪರ್ಕ ಲಭ್ಯವಿದೆ. ಈ ಎಲ್ಲಾ ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳು ಆನ್‍ಲೈನ್ ಶಿಕ್ಷಣ ಪಡೆಯುವುದಾದರೂ ಹೇಗೆ ಎಂದು ಕೂಡ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಸರ್ಕಾರ ಈ ಕೂಡಲೇ ನಿದ್ದೆಯಿಂದೆದ್ದು ಹಳಿತಪ್ಪಿರುವ ಶಿಕ್ಷಣದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಾಗೂ ಶಿಕ್ಷಕರಿಗೆ ನೆರವಾಗಲು ಕಾಂಗ್ರೆಸ್ಸಿನ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *