ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ: ಎಂ.ಎಂ ನರವಾಣೆ

ಲೇಹ್: ಭಾರತ ಮತ್ತು ಚೀನಾ ಗಡಿ ಹಂಚಿಕೊಂಡಿರುವ ಪೂರ್ವ ಲಡಾಕ್‍ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಭೂ ಸೇನಾ ಮುಖ್ಯ ಎಂ.ಎಂ ನರವಾಣೆ ಪ್ರತಿಕ್ರಿಯಿಸಿದ್ದಾರೆ.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಅವರು ಎರಡು ದಿನಗಳ ಕಾಲ ಲೇಹ್ ಮತ್ತು ಲಡಾಕ್ ಗೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಸ್ಥಳೀಯ ಅಧಿಕಾರಿಗಳು ಮತ್ತು ಸೈನಿಕರನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕನ ನಡೆಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಗಡಿಯಲ್ಲಿ ಸೈನಿಕರ ಆತ್ಮಸೈರ್ಯ ಹೆಚ್ಚಾಗಿದೆ. ಯಾವುದೇ ಸವಾಲುಗಳನ್ನು ಎದರಿಸಲು ಸಿದ್ಧರಾಗಿದ್ದಾರೆ. ಗಡಿಯಲ್ಲಿ ಗಂಭೀರ ಪರಿಸ್ಥಿತಿ ಇದ್ದು ನಾವು ಇದನ್ನು ನಾಜೂಕಾಗಿ ನಿಭಾಯಿಸಬೇಕು. ಇದಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಸುರಕ್ಷತೆಯನ್ನು ಹೆಚ್ಚು ಮಾಡಿದೆ. ಎಲ್ಲ ಪರಿಸ್ಥಿತಿಗೂ ಸೂಕ್ತ ಉತ್ತರ ಕೊಡುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಗಸ್ಟ್ 29 ರಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ಬಾರಿ ಚೀನಾ ಭಾರತದ ಭೂ ಪ್ರದೇಶವನ್ನು ಅತಿಕ್ರಮಿಸಿಲು ಪ್ರಯತ್ನಿಸಿ ವಿಫಲವಾಗಿದೆ. ಈ ಸಂಬಂಧ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆಗಳು ನಡೆಯುತ್ತಿದ್ದು ಸಭೆ ಯಶಸ್ವಿಯಾಗಿಲ್ಲ. ಈ ಹಿನ್ನೆಲೆ ಗಡಿಗೆ ಭೇಟಿ ಕೊಟ್ಟ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಪರಿಸ್ಥಿತಿ ಪರಿಶೀಲಿಸಿದರು.

Comments

Leave a Reply

Your email address will not be published. Required fields are marked *