ಜಾಕವೆಲ್ ದುರಸ್ಥಿಗೆ ತೆರಳಿದ್ದ ವಾಟರ್ ಮನ್ ಶವವಾಗಿ ಪತ್ತೆ

ಚಿಕ್ಕೋಡಿ: ಹಿರಣ್ಯಕೇಶಿ ನದಿ ತೀರದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಜಾಕವೆಲ್ ದುರಸ್ಥಿಗೆ ತೆರಳಿ ಮಂಗಳವಾರ ನದಿಗೆ ಬಿದ್ದಿದ್ದ ವಾಟರ್ ಮನ್ ಶವ ಇಂದು ಪತ್ತೆಯಾಗಿದೆ.

ನದಿಯಲ್ಲಿ ಸಿಲುಕಿದ್ದ ಶವವನ್ನು ಎನ್.ಡಿ.ಆರ್.ಎಫ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಡಾಣ ಗ್ರಾಮದ ನದಿ ತೀರದ ಜಾಕವೆಲ್ ದುರಸ್ಥಿಗೆ ಮಂಗಳವಾರ ಬೆಳಿಗ್ಗೆ ತೆರಳಿದ್ದ ವಾಟರ್ ಮನ್ ಬಸವರಾಜ್ ಹರಿಜನ (32) ಸಾವನ್ನಪ್ಪಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕವೆಲ್‍ಗೆ, ಪಾಮಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾಟರ್ ಮನ್ ಬಸವರಾಜ್ ದುರಸ್ಥಿಗೆ ಎಂದು ತೆರಳಿದ್ದರು. ಆದರೆ ಬಹಳ ಸಮಯವಾದರೂ ಬಾರದ ಕಾರಣ ಅವರು ನದಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿ ಹುಡಕಾಟ ನಡೆಸಲಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಹುಡುಕಾಟದ ಸಂದರ್ಭದಲ್ಲಿ ಮೊಸಳೆ ಕಂಡು ಬಂದ ಕಾರಣ ಮೊಸಳೆಗೆ ವಾಟರ್ ಮನ್ ಬಲಿಯಾಗಿದ್ದಾರೆ ಎನ್ನಲಾಗಿತ್ತು.

ಮಂಗಳವಾರ ಶವ ಸಿಗದ ಕಾರಣ ಇಂದು ಎನ್.ಡಿ.ಆರ್.ಎಫ್ ತಂಡ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶವವನ್ನು ಹೊರ ತೆಗೆಯಲಾಗಿದೆ. ವಾಟರ್ ಮನ್ ನದಿ ನೀರಿನ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *