ಕಾಂಗ್ರೆಸ್‍ಗೆ ರಾಹುಲ್ ಗಾಂಧಿ ಬಿಟ್ರೆ ಬೇರೆ ಆಯ್ಕೆ ಇಲ್ಲ: ಸಂಜಯ್ ರಾವತ್

ಮುಂಬೈ: ದೇಶಕ್ಕೆ ಬಲವಾದ ವಿರೋಧ ಪಕ್ಷ ಬೇಕಾಗಿರುವುದರಿಂದ ಕಾಂಗ್ರೆಸ್ ತನ್ನನ್ನು ತಾನೇ ಪುನರುಜ್ಜೀವನಗೊಳಿಸಬೇಕು. ರಾಹುಲ್ ಗಾಂಧಿ ಮಾತ್ರ ಸರ್ವಾನುಮತದ ಸ್ವೀಕಾರಾರ್ಹತೆ ಹೊಂದಿರುವ ಏಕೈಕ ನಾಯಕ ಎಂದು ಶಿವಸೇನೆ ಮುಖಂಡ, ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.

“ದೇಶಕ್ಕೆ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ ಮತ್ತು ಕಾಂಗ್ರೆಸ್‍ಗೆ ಪ್ಯಾನ್-ಇಂಡಿಯಾದ ಗುರುತು ಇದೆ. ಹೀಗಾಗಿ ಪಕ್ಷವು ಈಗಿನ ಪ್ರಕ್ಷುಬ್ಧತೆಯಿಂದ ಚೇತರಿಸಿಕೊಳ್ಳಬೇಕು ಹಾಗೂ ಪುನರಾರಂಭಿಸಬೇಕು” ಎಂದು ರಾವತ್ ತಿಳಿಸಿದ್ದಾರೆ.

ಸೋನಿಯಾ ಗಾಂಧಿಗೆ ವಯಸ್ಸಾಗುತ್ತಿದೆ. ಇನ್ನೂ ಪ್ರಿಯಾಂಕಾ ಗಾಂಧಿ ರಾಜಕೀಯದಲ್ಲಿ ಪೂರ್ಣಕಾಲಿಕವಾಗಿ ಕೆಲಸ ಮಾಡುವಂತೆ ಕಾಣುತ್ತಿಲ್ಲ. ಪಕ್ಷದಲ್ಲಿ ಅನೇಕ ಹಿರಿಯ ನಾಯಕರು ಇದ್ದಾರೆ. ಅವರ ಕಾರಣದಿಂದಾಗಿ ರಾಹುಲ್ ಗಾಂಧಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿಯೇತರ ನಾಯಕ ನನಗೆ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್‍ಗೆ ರಾಹುಲ್ ಗಾಂಧಿ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ರಾವತ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇದಕ್ಕೂ ಮೊದಲು ರಾವತ್ ನೇತೃತ್ವದ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಕಾಂಗ್ರೆಸ್ ನಾಯಕರು ಬರೆದ ಪತ್ರದ ಬಗ್ಗೆ ಸಂಪಾದಕೀಯ ಬರೆದಿತ್ತು. “ಪೂರ್ಣಕಾಲಿಕ ಪಕ್ಷದ ಅಧ್ಯಕ್ಷರ ಬೇಡಿಕೆ ಕುರಿತು ಕಾಂಗೆಸ್ಸಿನ 23 ಹಿರಿಯ ಮುಖಂಡರು ಸೋನಿಯಾ ಗಾಂಧಿಗೆ ಬರೆದ ಪತ್ರವು ರಾಹುಲ್ ಗಾಂಧಿ ನಾಯಕತ್ವವನ್ನು ಮುಗಿಸುವ ಪಿತೂರಿ” ಎಂದು ವಿಶ್ಲೇಷಿಸಿತ್ತು.

ರಾಹುಲ್ ಗಾಂಧಿಯವರ ಮೇಲೆ ಬಿಜೆಪಿ ವಾಗ್ದಾಳಿ ನಡೆಸಿದ ಸಂದರ್ಭದಲ್ಲಿ ಈ ಎಲ್ಲ ನಾಯಕರು ಎಲ್ಲಿಗೆ ಹೋಗಿದ್ದರು. ರಾಹುಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಬಂದ ನಂತರ ಈ ಎಲ್ಲ ನಾಯಕರು ಪಕ್ಷವನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ರಾಹುಲ್ ಗಾಂಧಿಯವರ ನಾಯಕತ್ವವನ್ನು ಮುಗಿಸುವ ಬಿಜೆಪಿಯ ಪಿತೂರಿಯಲ್ಲಿ ಒಳಗಿನ ಜನರು ಭಾಗಿಯಾದಾಗ ಪಕ್ಷವು ತನ್ನ ಸೋಲನ್ನು ಅನುಭವಿಸುವುದು ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಬಿಕ್ಕಟ್ಟುಗಳನ್ನು ಬರೆಹರಿಸಕೊಳ್ಳಬೇಕಿದೆ ಎಂದರು.

ಹೊಸ ಅಧ್ಯಕ್ಷರನ್ನು ನೇಮಿಸುವವರೆಗೂ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುವಂತೆ ಸೋನಿಯಾ ಗಾಂಧಿಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸರ್ವಾನುಮತದಿಂದ ಒತ್ತಾಯಿಸಿತು. ಅಲ್ಲದೇ ಪಕ್ಷದೊಳಗಿನ ಸವಾಲುಗಳನ್ನು ಎದುರಿಸಲು ಸಾಂಸ್ಥಿಕ ಬದಲಾವಣೆಗಳನ್ನು ತರಲು ಅವರಿಗೆ ಅಧಿಕಾರ ನೀಡಿತು ಎಂದರು.

Comments

Leave a Reply

Your email address will not be published. Required fields are marked *