ಪತ್ನಿಗೆ ಕಿರುಕುಳ ನೀಡಿ, ಹೊಡೆದು ಚೈನ್‍ನಲ್ಲಿ ಕಟ್ಟಿ ಹಾಕಿದ ಪತಿ

– ಶೌಚಾಲಯ ಬಳಕೆಗೂ ಬಿಡದ ಗಂಡ
– ಕೆಲ ತಿಂಗಳಿನಿಂದ ನರಕ ಅನುಭವಿಸಿದ್ದ ಮಹಿಳೆಯ ರಕ್ಷಣೆ

ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ನರಕದ ಜೀವನ ನಡೆಸುತ್ತಿದ್ದ 32 ವರ್ಷದ ಮಹಿಳೆಯನ್ನು ದೆಹಲಿಯ ಮಹಿಳಾ ಆಯೋಗದ ಸದಸ್ಯರು ರಕ್ಷಣೆ ಮಾಡಿದ್ದಾರೆ.

ದೆಹಲಿಯ ತ್ರಿಲೋಕಪುರಿ ಪ್ರದೇಶದ ಮಹಿಳೆಯನ್ನು ಆಕೆಯ ಪತಿಯೇ ಕಾಲಿಗೆ ಚೈನ್ ಹಾಕುವ ಮೂಲಕ ಕೆಲ ತಿಂಗಳಿನಿಂದ ಕಟ್ಟಿಹಾಕಿ ಬಂಧಿಸಿದ್ದಾನೆ. ಅಲ್ಲದೆ ಆತ ಪ್ರತಿದಿನ ಆಕೆಗೆ ಹಿಂಸೆ ನೀಡುತ್ತಿದ್ದನು. ಆದರೆ ಪತಿ ಯಾಕೆ ಈ ರೀತಿ ಪತ್ನಿಗೆ ಕಿರುಕುಳ ನೀಡಿದ್ದಾನೆ ಎಂಬುದು ತಿಳಿದುಬಂದಿಲ್ಲ.

ಮಹಿಳೆಗೆ ಆಕೆಯ ಪತಿ ಪ್ರತಿನಿತ್ಯ ಹೊಡೆಯುತ್ತಿರುವುದರಿಂದ ಆಕೆಯ ಆರೋಗ್ಯ ತೀರಾ ಹದಗೆಟ್ಟಿತ್ತು. ಅಲ್ಲದೆ ಮೈಮೇಲಿದ್ದ ಬಟ್ಟೆ ಕೂಡ ಹರಿದು ಹೋಗಿತ್ತು. ಈ ವಿಚಾರ ಮಹಿಳಾ ಆಯೋಗದ ಸದಸ್ಯರ ಗಮನಕ್ಕೆ ಬಂದಿದೆ. ಕೂಡಲೇ ಆಯೋಗದ ಮುಖ್ಯಸ್ಥೆ ಸ್ವಾತಿ ಮೀವಾಲಿ ತನ್ನ ಸದಸ್ಯರೊಂದಿಗೆ ಮಹಿಳೆಯ ಮನೆಗೆ ದೌಡಾಯಿಸಿ ರಕ್ಷಣೆ ಮಾಡಿದ್ದಾರೆ.

ಮನೆ ಗಬ್ಬು ವಾಸನೆ ಬರುತ್ತಿತ್ತು. ಮಹಿಳೆಯನ್ನು ಆಕೆಯ ಪತಿ ಶೌಚಾಲಯ ಬಳಕೆ ಮಾಡಲೂ ಬಿಡುತ್ತಿರಲಿಲ್ಲ ಎಂದು ಸ್ವಾತಿ ತಿಳಿಸಿದ್ದಾರೆ. ಈ ಸಂಬಂಧ ಮಕ್ಕಳ ಜೊತೆ ಮಾತನಾಡಿದಾಗ, ಅಮ್ಮ ನಮ್ಮ ಅಪ್ಪನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಆದರೆ ಅಪ್ಪನೇ ಅವರನ್ನು ವಾಪಸ್ ಮನೆಗೆ ಎಳೆದುಕೊಂಡು ಬಂದು ಹೊಡೆದು- ಬಡಿದು, ಸಾಕಷ್ಟು ಹಿಂಸೆ ಕೊಟ್ಟು ಎಲ್ಲೂ ಹೋಗದಂತೆ ಚೈನ್ ನಲ್ಲಿ ಕಟ್ಟಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಮಹಿಳೆಯ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ಸ್ವಾತಿ ಹೇಳಿದ್ದಾರೆ.

ಈ ಘಟನೆ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತಿದೆ. ಇಂತಹ ದೌರ್ಜನ್ಯಗಳಿಂದ ಮಹಿಳೆ ಹಾಗೂ ಹೆಣ್ಣು ಮಕ್ಕಳನ್ನು ರಕ್ಷಿಸಲು ಸಮಾಜದ ಜನರು ಮುಂದೆ ಬರುವ ಅವಶ್ಯಕತೆ ಇದೆ ಎಂದು ಸ್ವಾತಿ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *