ಐಪಿಎಲ್ 2020: ಆರ್‌ಸಿಬಿ ಆಟಗಾರರಿಗೆ ಕ್ಯಾಪ್ಟನ್ ಕೊಹ್ಲಿ ಖಡಕ್ ವಾರ್ನಿಂಗ್

ದುಬೈ: ಐಪಿಎಲ್ 2020ರ ಆವೃತ್ತಿಯ ಆರಂಭದ ಮುನ್ನವೇ ಆರ್‌ಸಿಬಿ ಆಟಗಾರರಿಗೆ ನಾಯಕ ವಿರಾಟ್ ಕೊಹ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಯುಎಇನಲ್ಲಿ ಸೆ.19 ರಿಂದ ನಂ.10 ವರೆಗೂ ಐಪಿಎಲ್ ಟೂರ್ನಿ ನಡೆಯಲಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇಗೆ ತೆರಳಿದ್ದು, ಕ್ವಾರಂಟೈನ್‍ನಲ್ಲಿವೆ. ಈ ಹಿನ್ನೆಲೆಯಲ್ಲಿ ತಂಡದೊಂದಿಗೆ ನಾಯಕ ಕೊಹ್ಲಿ ಸಭೆ ನಡೆಸಿದ್ದು, ಬಯೋ ಸೆಕ್ಯೂರ್ ಬಬೂಲ್ ನಿಯಮಗಳನ್ನು ಯಾರು ಬ್ರೇಕ್ ಮಾಡಬಾರದು. ಒಂದು ಸಣ್ಣ ತಪ್ಪು ಈ ಟೂರ್ನಿ ಮೇಲೆ ಪ್ರಭಾವ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮಗೆ ನೀಡಿರುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕಿದೆ. ಆಟಗಾರರು ಮಾತ್ರವಲ್ಲದೇ ತಂಡದ ಸಹಾಯಕ ಸಿಬ್ಬಂದಿ ಕೂಡ ಇದರಲ್ಲಿರುತ್ತಾರೆ. ಈ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ. ಏಕೆಂದರೆ ಒಂದು ಸಣ್ಣ ತಪ್ಪು ಇಡೀ ಟೂರ್ನಿ ಮೇಲೆ ಪ್ರಭಾವ ಬೀರಲಿದೆ. ಆ ತಪ್ಪು ನಮ್ಮ ತಂಡದಿಂದ ನಡೆಯಬಾರದು. ತರಬೇತಿಯ ಸೆಷನ್‍ಗಾಗಿ ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್ ತಂಡಗಳಿಗೆ 6 ದಿನಗಳ ಕ್ವಾರಂಟೈನ್ ಅವಧಿ ನೀಡಲಾಗಿದೆ. ಕ್ವಾರಂಟೈನ್ ಅವಧಿಯ ಬಳಿಕ ಟೂರ್ನಿ ಆರಂಭಕ್ಕೂ ಮುನ್ನ 3 ಬಾರಿ ಆಟಗಾರರಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಈ ಎಲ್ಲಾ ವರದಿಗಳು ನೆಗೆಟಿವ್ ಬಂದರೇ ಆಟಗಾರರಿಗೆ ಬಯೋ ಸೆಕ್ಯೂರ್ ವಾತಾವರಣದಲ್ಲಿ ಆಡಲು ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್‌ – ಅಭಿಮಾನಿಗಳಿಲ್ಲ, ಬಿಸಿಸಿಐ ಸಿದ್ಧಪಡಿಸಿದೆ ಕೋವಿಡ್‌ 19 ಮಾರ್ಗಸೂಚಿ

ಬಯೋ ಸೆಕ್ಯೂರ್ ಬಬೂಲ್‍ಗೆ ಒಮ್ಮೆ ಆಟಗಾರ ಎಂಟ್ರಿ ಕೊಟ್ಟ ಬಳಿಕ ಬೇರೆ ಯಾರನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ. ಒಂದೊಮ್ಮೆ ನಿಯಮಗಳನ್ನು ಉಲ್ಲಂಘಿಸಿದರೆ ಆತಂಹ ಆಟಗಾರನನ್ನು 7 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಆ ಬಳಿಕ ಕೊರೊನಾ ಟೆಸ್ಟ್ ಮಾಡಿ ವರದಿ ಬಂದ ಬಳಿಕ ಆಡಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ನಿಯಮಗಳ ಕುರಿತ ಮಾಹಿತಿಯನ್ನು ಬಿಸಿಸಿಐ ಆಟಗಾರರಿಗೆ ರವಾನಿಸಿದೆ. ಉಳಿದಂತೆ 2008ರಿಂದ ಐಪಿಎಲ್ ಟೂರ್ನಿ ನಡೆಯುತ್ತಿದ್ದರೂ, ಇದುವರೆಗೂ ಆರ್‌ಸಿಬಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಅಲ್ಲದೇ ಕಳೆದ ಮೂರು ಆವೃತ್ತಿಗಳಲ್ಲಿ ತಂಡ ಪ್ಲೇ-ಆಫ್ ಕೂಡ ಪ್ರವೇಶ ಪಡೆದಿರಲಿಲ್ಲ.

ಏನಿದು ಬಯೋ ಬಬಲ್‌?
ಕೋವಿಡ್‌ 19 ಬಳಿಕ ಈ ಬಯೋಬಬಲ್‌ ಪದ ಸಾಕಷ್ಟು ಸದ್ದು ಮಾಡುತ್ತಿದೆ. ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಇದನ್ನು ಅಳವಡಿಸಿತ್ತು. ಆಟಗಾರರು ಹೊರ ಪ್ರಪಂಚದದಿಂದ ಪ್ರತ್ಯೇಕವಾಗಿ ಸುರಕ್ಷಿತ ವಾತವರಣದಲ್ಲಿರುವ  ಪ್ರದೇಶವೇ ಬಯೋ ಬಬಲ್‌. ಈ ನಿರ್ಧಿಷ್ಟ ಪ್ರದೇಶದಲ್ಲಿ ಕೆಲವೇ ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮಾಧ್ಯಮದರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುತ್ತದೆ. ಈ ಜಾಗದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗುತ್ತದೆ. ಉಷ್ಣಾಂಶ ತಪಾಸಣೆ, ಪ್ರತಿದಿನವೂ ಆರೋಗ್ಯದ ವರದಿಯನ್ನು ನಮೂದಿಸಬೇಕಾಗುತ್ತದೆ.

Comments

Leave a Reply

Your email address will not be published. Required fields are marked *