ನಾನು ಅಸ್ಸಾಂನ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ: ರಂಜನ್ ಗೊಗೊಯ್

ನವದೆಹಲಿ: ನಾನು ಅಸ್ಸಾಂನ ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿಯಲ್ಲ ಎಂದು ಸುಪ್ರೀಂ ಕೋರ್ಟ್‍ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

ಮುಂದಿನ ವರ್ಷ ಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ತರುಣ್ ಗೊಗೊಯಿ ಶನಿವಾರ ಬೆಳಗ್ಗೆ ಹೇಳಿದ್ದರು.

ಈ ವಿಚಾರವಾಗಿ ಇಂದು ಮಾತನಾಡಿರುವ ರಂಜನ್ ಗೊಗೊಯಿಯವರು, ನಾನು ರಾಜಕಾರಣಿಯಲ್ಲ ಮತ್ತು ಅಂತಹ ಯಾವುದೇ ಮಹತ್ವಾಕಾಂಕ್ಷೆ ಅಥವಾ ಉದ್ದೇಶವನ್ನು ಹೊಂದಿಲ್ಲ. ಈ ರೀತಿಯ ವಿಚಾರದಲ್ಲಿ ಯಾರೂ ನನ್ನ ಉಲ್ಲೇಖ ಮಾಡಿಲ್ಲ ಎಂದು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶಿತರಾಗಿರುವ ಗೊಗೊಯ್ ತಿಳಿಸಿದ್ದಾರೆ. ಈ ಮೂಲಕ ತರುಣ್ ಗೊಗೊಯಿ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರಿಗೂ ಮತ್ತು ಸದನಕ್ಕೆ ಆಯ್ಕೆಯಾಗಿ ರಾಜಕೀಯ ಪಕ್ಷದ ನಾಮನಿರ್ದೇಶಿತ ವ್ಯಕ್ತಿಯ ನಡುವಿನ ವ್ಯತ್ಯಾಸವನ್ನು ಜನರು ಅರ್ಥಮಾಡಿಕೊಳ್ಳದಿರುವುದು ದುರದೃಷ್ಟಕರ. ನಾನು ಪ್ರಜ್ಞಾಪೂರ್ವಕವಾಗಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯನಾಗಲೂ ತೀರ್ಮಾನ ಮಾಡಿದ್ದೇನೆ. ಇದು ನಾನು ಸ್ವಾತಂತ್ರ್ಯವಾಗಿರಲು ಮತ್ತು ನನಗೆ ಆಸಕ್ತಿ ಇರುವ ವಿಚಾರದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಹಾಯಕವಾಗುತ್ತದೆ ಎಂದು ರಂಜನ್ ಗೊಗೊಯ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ತರುಣ್ ಗೊಗೊಯಿ ಅವರು, ಬಿಜೆಪಿ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿ ಅವರ ಹೆಸರಿಗೆ ಎಂಬ ಮಾಹಿತಿ ತಮ್ಮ ವಿಶ್ವಾಸನೀಯ ಮೂಲಗಳಿಂದ ಮಾಹಿತಿ ಲಭಿಸಿದೆ. ಮಾಜಿ ಸಿಐಜೆ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಮುಂಬರುವ ನಿರೀಕ್ಷಿತ ಸಿಎಂ ಅಭ್ಯರ್ಥಿಯಾಗಿಯೂ ಕೂಡ ಅವರು ಅಂಗೀಕರಿಸಬಹುದು ಎಂದಿದ್ದರು.

`ಎಲ್ಲವೂ ರಾಜಕೀಯ. ಅಯೋಧ್ಯೆ ರಾಮಮಂದಿರ ವಿವಾದ ಕುರಿತು ರಂಜನ್ ಗೊಗೊಯಿ ನೀಡಿದ ತೀರ್ಪಿನಿಂದ ಬಿಜೆಪಿ ಸಂತೋಷದಿಂದ ಇದೆ. ಈ ಹಿನ್ನೆಲೆಯಲ್ಲೇ ಅವರು ರಾಜಕೀಯ ಪ್ರವೇಶ ಮಾಡಿ ರಾಜ್ಯಸಭಾ ಸ್ಥಾನವನ್ನು ಅಂಗೀಕರಿಸಿದ್ದರು. ರಾಜ್ಯಸಭಾ ಸದಸ್ಯ ಸ್ಥಾನ ಅವರು ಏಕೆ ನಿರಾಕರಿಸಲಿಲ್ಲ? ಸುಲಭವಾಗಿ ಮಾನವ ಹಕ್ಕುಗಳ ಕಮಿಷನ್‍ನಲ್ಲಿ ಅಧ್ಯಕ್ಷರಾಗಬಹುದಿತ್ತು. ಅವರಿಗೆ ರಾಜಕೀಯ ಆಶ್ರಯವಿದ್ದು, ಆದ್ದರಿಂದಲೇ ನಾಮಿನೇಷನ್ ಅಂಗೀಕರಿಸಿದ್ದರು’ ಎಂದು ತರುಣ್ ಗೊಗೊಯಿ ಕಿಡಿಕಾರಿದ್ದರು.

Comments

Leave a Reply

Your email address will not be published. Required fields are marked *