ದಾವೂದ್ ನಮ್ಮ ನೆಲದಲ್ಲಿಲ್ಲ- ಉಲ್ಟಾ ಹೊಡೆದ ಪಾಕಿಸ್ತಾನ

ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂಬ ಮಾಹಿತಿ ಇತ್ತೀಚೆಗೆ ವರದಿಯಾಗಿದೆ. ಆದರೆ ಪಾಪಿ ಪಾಕಿಸ್ತಾನ ಇದನ್ನು ಅಲ್ಲಗಳೆದಿದ್ದು, ದಾವೂದ್ ನಮ್ಮ ನೆಲದಲ್ಲಿಲ್ಲ ಎಂದು ಹೇಳಿದೆ.

ಪಾಸ್‍ಪೋರ್ಟ್ ವಿವರಗಳೊಂದಿಗೆ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನ ವಿಶ್ವಸಂಸ್ಥೆಗೆ ಸಲ್ಲಿಕೆ ಮಾಡಿದ್ದು, ಇದರಲ್ಲಿ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಸಹ ಇದೆ. ಅಲ್ಲದೆ ಪಾಸ್‍ಪೋರ್ಟ್‍ನಲ್ಲಿ ಪಾಕಿಸ್ತಾನದ ಕರಾಚಿ ವಿಳಾಸ ಸಹ ಇದೆ. ಇತ್ತೀಚೆಗಷ್ಟೇ ದಾವೂದ್ ತಮ್ಮಲ್ಲೇ ಇದ್ದಾನೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನ, ಇದೀಗ ಇದ್ದಿಕ್ಕಿದ್ದಂತೆ ಉಲ್ಟಾ ಹೊಡೆದಿದೆ. ದಾವೂದ್ ನಮ್ಮ ನೆಲದಲ್ಲಿಲ್ಲ ಎಂದು ತಿಳಿಸಿದೆ.

ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಪಾಕ್ ಪಾಲಿಸಬೇಕಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮದ ಪ್ರಕಾರ ಉಗ್ರರ ಆಸ್ತಿ ಜಪ್ತಿ, ಪ್ರಯಾಣ ನಿಷೇಧ ಹಾಗೂ ಶಸ್ತ್ರಾಸ್ತ್ರ ನಿರ್ಬಂಧದ ಕುರಿತು ಮಾಹಿತಿ ನೀಡಿದೆ. ಈ ವೇಳೆ ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಕುರಿತು ಸಹ ಉಲ್ಲೇಖಿಸಿದ್ದು, ಇದರಲ್ಲಿ ಆತನ ವಿಳಾಸವನ್ನು ಕರಾಚಿ ಎಂದು ನಮೂದಿಸಿದೆ.

ದಾವೂದ್ ಪಾಕಿಸ್ತಾನದಲ್ಲೇ ಇರುವಿಕೆಯನ್ನು ಒಪ್ಪಿಕೊಂಡ ಬಳಿಕ ಪಾಕಿಸ್ತಾನದಲ್ಲಿ ಅವನ ಕಾರ್ಯಾಚರಣೆಗಳ ಕುರಿತ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದನ್ನು ಪಾಪಿ ಪಾಕಿಸ್ತಾನ ಮುಚ್ಚಿಟ್ಟಿದೆ. ಇದೀಗ ದಾವೂದ್ ಪಾಕಿಸ್ತಾನದಲ್ಲೇ ಇರುವ ಕುರಿತು ಸುದ್ದಿಯಾಗುತ್ತಿದೆ. ಹೀಗಾಗಿ ಪಾಕಿಸ್ತಾನ ದಾವೂದ್ ಕರಾಚಿಯಲ್ಲಿರುವುದನ್ನು ಸಹ ನಿರಾಕರಿಸುತ್ತಿದೆ.

ಭೂಗತ ಪಾತಾಕಿ ದಾವೂದ್ ಇಬ್ರಾಹಿಂ ನಮ್ಮಲ್ಲೇ ಇದ್ದಾನೆ ಎಂದು ಪಾಕಿಸ್ತಾನ ಸತ್ಯವನ್ನು ಒಪ್ಪಿಕೊಂಡಿತ್ತು. ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ತಲೆಮರೆಸಿಕೊಂಡು ಪಾಕಿಸ್ತಾನದಲ್ಲಿ ಅವಿತು ಕೂತಿದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಮಾತನ್ನು ಪಾಕಿಸ್ತಾನ ತಳ್ಳಿ ಹಾಕಿಕೊಂಡು ಬಂದಿತ್ತು. ಹಲವು ದಿನಗಳ ಬಳಿಕ ಈಗ ಸ್ವತಃ ಪಾಕಿಸ್ತಾನವೇ ದಾವೂದ್ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿತ್ತು.

ಆರ್ಥಿಕ ನಿರ್ಬಂಧದಿಂದ ಹೊರ ಬರಲು ಪಾಕಿಸ್ತಾನ ತಮ್ಮ ದೇಶದಲ್ಲಿ ಸಕ್ರಿಯವಾಗಿರುವ 88 ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡುವುದಾಗಿ ಹೇಳಿಕೊಂಡಿತ್ತು. ಇದರ ಭಾಗವಾಗಿ ದಾವೂದ್ ನಮ್ಮಲ್ಲಿಯೇ ಇದ್ದಾನೆ ಎಂದು ಒಪ್ಪಿಕೊಂಡಿತ್ತು. ಪಾಕಿಸ್ತಾನ ಸೇರಿದಂತೆ 14 ರಾಷ್ಟ್ರಗಳ ಪಾಸ್‍ಪೋರ್ಟ್‍ಗಳು ದಾವೂದ್ ಬಳಿ ಇವೆ ಎಂದು ಮಾಹಿತಿ ನೀಡಿತ್ತು. ಅಲ್ಲದೆ ದಾವೂದ್ ಆಸ್ತಿ, ಬ್ಯಾಂಕ್ ಅಕೌಂಟ್ ಸೀಜ್ ಮಾಡಿ ಆರ್ಥಿಕ ದಿಗ್ಬಂಧನ ಹೇರುತ್ತೇವೆ ಎಂದೂ ಕೂಡ ಹೇಳಿತ್ತು.

ಪ್ಯಾರಿಸ್ ಮೂಲದ ಎಫ್‍ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಉಗ್ರರನ್ನು ಮಟ್ಟಹಾಕದೇ ಇದ್ದರೆ, ಬೂದು ಬಣ್ಣದಲ್ಲಿರುವ ನಿಮ್ಮನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದರಿಂದ ಹೆದರಿದ ಪಾಕಿಸ್ತಾನ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜೆಯುಡಿಯ ಹಫೀಜ್ ಸಯೀದ್, ಜೆಇಎಂನ ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ 88 ಉಗ್ರ ಸಂಘಟನೆಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಲು ನೋಟಿಸ್ ನೀಡಿದೆ.

ಉಗ್ರ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ಯಾರಿಸ್ ಮೂಲದ ಎಫ್‍ಎಟಿಎಫ್ 2019ರಲ್ಲಿ ಪಾಕಿಸ್ತಾನಕ್ಕೆ ಡೆಡ್‍ಲೈನ್ ವಿಧಿಸಿತ್ತು. ಆದರೆ ಈ ಡೆಡ್‍ಲೈನ್ ಅನ್ನು ಕೊರೊನಾ ಕಾರಣದಿಂದಾಗಿ ಮುಂದಕ್ಕೆ ಹಾಕಲಾಗಿದೆ. ಈಗ ಈ ಗಡುವು ಮುಗಿದಿದ್ದು, ಕಪ್ಪುಪಟ್ಟಿಗೆ ಸೇರುವ ಭಯದಲ್ಲಿ ಪಾಕಿಸ್ತಾನ ತನ್ನ ಉದರದಲ್ಲಿ ಬಚ್ಚಿಟ್ಟಿಕೊಂಡಿದ್ದ ಉಗ್ರಕ್ರಿಮಿಗಳಿಗೆ ನೋಟಿಸ್ ನೀಡಿದೆ.

Comments

Leave a Reply

Your email address will not be published. Required fields are marked *