ಪ್ರತಿಭಟನೆ ನಿಲ್ಲಿಸಿ ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯ ಸಿಬ್ಬಂದಿಯಲ್ಲಿ ಸುಧಾಕರ್ ಮನವಿ

ಬೆಂಗಳೂರು: ನಂಜನಗೂಡು ಟಿಹೆಚ್‍ಒ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಚಿವರು, ಮೈಸೂರಿನ ಟಿಎಚ್‍ಒ ಕಚೇರಿ ಮುಂದೆ ಪ್ರತಿಭಟಿಸುತ್ತಿರವ ವೈದ್ಯ ಸಿಬ್ಬಂದಿಗೆ ನನ್ನದೊಂದು ಕಳಕಳಿಯ ಮನವಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರತಿಭಟನೆ ಮಾಡಿ ರೋಗಿಗಳಿಗೆ ತೊಂದರೆ ಮಾಡಬೇಡಿ. ‘ವೈದ್ಯೋ ನಾರಾಯಣೋಹರಿಃ’ ಎಂದು ನಂಬಿರುವ ಜನರ ಸೇವೆಗೆ ಮುಂದಾಗಿ.

ಈಗಾಗಲೇ ಆರೋಗ್ಯಾಧಿಕಾರಿ ನಾಗೇಂದ್ರ ಸಾವಿನ ಬಗ್ಗೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡಲು ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ. ಆದರೂ ತಾವು ಈ ರೀತಿ ಪ್ರತಿಭಟನೆ ಮಾಡುವುದು ಸರಿಯಲ್ಲ. ವರದಿ ಬಂದ ತಕ್ಷಣವೇ ಯಾರೇ ತಪ್ಪಿತಸ್ಥರಾಗಿದ್ದರೂ ಸರಿ ಕ್ರಮ ಕೈಗೊಳ್ಳಲಾಗುವುದು. ಇದನ್ನೂ ಓದಿ: ಡಾ.ನಾಗೇಂದ್ರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ – 7 ದಿನಗಳೊಳಗೆ ತನಿಖಾ ವರದಿಗೆ ಸಿಎಂ ಸೂಚನೆ

ನಾಗೇಂದ್ರ ಅವರ ಸಾವಿನ ವಿಷಯದಲ್ಲಿ ಸರ್ಕಾರಕ್ಕೆ ಯಾರನ್ನೂ ರಕ್ಷಿಸುವ ಇಚ್ಛೆಯಿಲ್ಲ. ಯಾರೇ ತಪ್ಪು ಮಾಡಿದರೂ ಅದಕ್ಕೆ ಕ್ಷಮೆಯಿಲ್ಲ. ಪ್ರತಿಭಟಿಸುವುದನ್ನು ನಿಲ್ಲಿಸಿ. ಕಾರ್ಯಪ್ರವೃತ್ತರಾಗಿ ರೋಗಿಗಳ ಸಂಕಷ್ಟಕ್ಕೆ ನೆರವಾಗಿ. ಜನ ಸೇವೆಯೇ ಜನಾರ್ಧನ ಸೇವೆ. ತನಿಖೆಯ ನಂತರ ಸತ್ಯ ತಿಳಿದೇ ತಿಳಿಯುತ್ತದೆ ಎಂದು ಬರೆದುಕೊಳ್ಳುವ ಮೂಲಕ ಸಚಿವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲು ನೀವು ಇಲ್ಲಿಂದ ಹೊರಟು ಹೋಗಿ- ಸುಧಾಕರ್‌ಗೆ ವೈದ್ಯೆ ತರಾಟೆ

ನಡೆದಿದ್ದೇನು?:
ಅರಮನೆ ನಗರಿಯಲ್ಲಿ ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ನಾಗೇಂದ್ರ ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರ ಆತ್ಮಹತ್ಯೆಗೆ ಸಿಇಓ ಅವರೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

https://www.youtube.com/watch?v=IEJgsxlhZ0w&t=324s

Comments

Leave a Reply

Your email address will not be published. Required fields are marked *