ಡ್ರೈ ಫ್ರೂಟ್ಸ್‌ನಲ್ಲಿ ಅರಳಿದ ಗಣಪ – ಕೊರೊನಾ ಸೋಂಕಿತರಿಗೆ ವಿತರಣೆ

– ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯೆಯಿಂದ ಪ್ರತಿಷ್ಠಾಪನೆ

ಗಾಂಧಿನಗರ: ಇಂದು ಗಣೇಶ ಚತುರ್ಥಿ ಹಿನ್ನೆಲೆ ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿ, ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಗುಜರಾತ್‍ನಲ್ಲಿ ವ್ಯದ್ಯೆಯೊಬ್ಬರು ಡ್ರೈ ಫ್ರೂಟ್ಸ್‌ನಿಂದ ಗಣಪನ ವಿಗ್ರಹ ಸಿದ್ಧ ಮಾಡಿದ್ದಾರೆ.

ಗುಜರಾತ್‍ನ ಸೂರತ್ ನಿವಾಸಿ ಡಾ.ಅದಿತಿ ಮಿತ್ತಲ್ ಅವರು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಡ್ರೈ ಫ್ರೂಟ್ಸ್‌ನಿಂದ ಗಣಪತಿ ವಿಗ್ರಹವನ್ನು ತಯಾರಿಸಿದ್ದಾರೆ. ಈ ಪರಿಸರ ಸ್ನೇಹಿ ಗಣಪನ ವಿಗ್ರಹವು ಸುಮಾರು 20 ಇಂಚುಗಳಷ್ಟಿದೆ. ಇದನ್ನು ತಯಾರಿಸಲು ವಾಲ್‍ನಟ್ಸ್, ಕಡಲೆಕಾಯಿ, ಗೋಡಂಬಿ ಮತ್ತು ಬಾದಾಮಿ ಮುಂತಾದ ಡ್ರೈ ಫ್ರೂಟ್ಸ್ ಬಳಸಲಾಗಿದೆ. ಕಣ್ಣುಗಳನ್ನು ಗೋಡಂಬಿಯಿಂದ ತಯಾರಿಸಲಾಗಿದೆ.

ಈ ವರ್ಷ ಕೊರೊನಾದಿಂದ ದೇಶದೆಲ್ಲೆಡೆ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಪರಿಸರ ಸ್ನೇಹಿ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಹೀಗಾಗಿ ಡಾ. ಮಿತ್ತಲ್ ಅವರು ಕೂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಿದ್ದರು. ಅದರಂತೆಯೇ ಆಸ್ಪತ್ರೆಯಲ್ಲಿ ಡ್ರೈ ಫ್ರೂಟ್ಸ್‌ನಿಂದ ವಿಗ್ರಹ ಸ್ಥಾಪಿಸಿ ಪೂಜೆ ಸಲ್ಲಿಸಿದ್ದಾರೆ.

ನಾನು ಈ ವಿಗ್ರಹವನ್ನು ಒಣ ಹಣ್ಣುಗಳಿಂದ ತಯಾರಿಸಿದ್ದೇನೆ. ಅದನ್ನು ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪೂಜೆಯ ನಂತರ ಡ್ರೈ ಫ್ರೂಟ್ಸ್‌ಗಳನ್ನು ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿತರಿಸುವ ಮೂಲಕ ಸಾಂಪ್ರದಾಯಕವಾಗಿ ಗಣಪನ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು ಎಂದು ಡಾ.ಮಿತ್ತಲ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *