ದಲಿತ ಶಾಸಕನ ಮನೆಗೆ ರಕ್ಷಣೆ ನೀಡದ ನಿಮ್ಮ ಸರ್ಕಾರ ಕೋಟ್ಯಂತರ ದಲಿತರನ್ನು ರಕ್ಷಿಸುತ್ತಾ – ಬಿಎಲ್‌ಎಸ್‌ಗೆ ಸಿದ್ದು ಪ್ರಶ್ನೆ

ಬೆಂಗಳೂರು: ನಿಮ್ಮದೇ ಪಕ್ಷ‌ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌, ಬಿಜೆಪಿ ನಾಯಕರ ಆರೋಪ, ಪ್ರತ್ಯಾರೋಪ ತೀವ್ರಗೊಂಡಿದೆ.

ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಬಿಎಲ್‌ ಸಂತೋಷ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ದೆಹಲಿ ತಂತ್ರಗಾರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವುದಿಲ್ಲ ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ಬಿಎಲ್‌ ಸಂತೋಷ್‌ ಅವರು, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ದಾಳಿಯ ಕೃತ್ಯವನ್ನು ಖಂಡಿಸದೇ ಈ ರೀತಿಯ ಬೂಟಾಟಿಕೆ ಮಾಡುವುದನ್ನು ನಿಲ್ಲಿಸಿ. ನಿಮ್ಮದೇ ಕಾಂಗ್ರೆಸ್‌ ಪಕ್ಷದ ದಲಿತ ಶಾಸಕನ ಮೇಲೆ ನಡೆದ ದಾಳಿ ವೇಳೆ ಅವರ ಬೆಂಬಲಕ್ಕೆ ನಿಲ್ಲಿ ಎಂದು ಟ್ವೀಟ್‌ ಮಾಡಿದ್ದರು.

ಬಿಎಲ್‌ ಸಂತೋಷ್‌ ಅವರು ಟ್ವೀಟ್‌ನಲ್ಲಿ ʼದಲಿತʼ ಪದವನ್ನು ಬಳಸಿರುವುದು ಸಿದ್ದರಾಮಯ್ಯನವರ ಸಿಟ್ಟಿಗೆ ಕಾರಣವಾಗಿದ್ದು, ಈಗ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಹಾಕಿ ಅದಕ್ಕೆ #AntiDalitBJP ಎಂಬ ಹ್ಯಾಷ್‌ ಟ್ಯಾಗ್‌ ಹಾಕಿ ತಿರುಗೇಟು ನೀಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಬಿ.ಎಲ್ ಸಂತೋಷ್ ಅವರು ‘ಹಿಂದುತ್ವ’ದ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ, ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ?

ರಾಜ್ಯದಲ್ಲಿ ನಿಮ್ಮದೇ ಪಕ್ಷ‌ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ ಸಂತೋಷ್ ಅವರೇ?

ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ… ದಲಿತರ ಬೆನ್ನತ್ತಿ ಹಿಂಸಿಸಿ, ಸಾಯಿಸಿದ್ದು ಯಾರ ಆಡಳಿತದಲ್ಲಿ ಸಂತೋಷ್ ಅವರೇ?

ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು ಸಂತೋಷ್ ಅವರೇ?ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?

ನಿಮ್ಮ ಕಾಲದಲ್ಲಿ ದಲಿತರ ಹತ್ಯೆ/ದೌರ್ಜನ್ಯ ದುಪ್ಪಟ್ಟಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತೀರಿ. ಇದು ನಿಮ್ಮ ದಲಿತರ ಮೇಲಿನ ಕಾಳಜಿಯಲ್ಲವೇ ಸಂತೋಷ್ ಅವರೇ? ಇದನ್ನೂ ಓದಿ: 2 ಪಕ್ಷಗಳ ಪರ ನವೀನ್ ಪೋಸ್ಟ್‌ – ಸ್ಟೇಟಸ್‌ ಹಿಂದಿತ್ತು ಮಾಸ್ಟರ್‌ ಪ್ಲಾನ್‌

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿ ಪಿ-ಟಿಎಸ್‌ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ.88,395 ಕೋಟಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರ್ತೀರಾ ಸಂತೋಷ್ ಅವರೇ?

ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು‌ ಸಂತೋಷ್ ಅವರೇ? ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು?

https://www.facebook.com/Siddaramaiah.Official/posts/1237335883278538

Comments

Leave a Reply

Your email address will not be published. Required fields are marked *