ಚಿತ್ರರಂಗದ ಸಮಸ್ಯೆಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದೇವೆ: ಶಿವಣ್ಣ

– ಡಿಸಿಎಂ ಅಶ್ವಥ್ ನಾರಾಯಣ್ ಜೊತೆ ಚರ್ಚೆ ನಡೆಸಿದ ಟಗರು

ಬೆಂಗಳೂರು: ಕೊರೊನಾ ವೈರಸ್ ಕಾರಣದಿಂದ ಚಿತ್ರರಂಗಕ್ಕೆ ಬಹಳ ನಷ್ಟವಾಗಿದೆ. ಇದರ ಬಗ್ಗೆ ನಟ ಶಿವರಾಜ್‍ಕುಮಾರ್ ಅವರು ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಶ್ವಥ್ ನಾರಾಯಣ್ ಅವರ ನಿವಾಸಕ್ಕೆ ಬಂದ ಶಿವಣ್ಣ, ಚಿತ್ರರಂಗದ ಹಲವಾರು ತೊಂದರೆಗಳ ಬಗ್ಗೆ ಡಿಸಿಎಂ ಅವರ ಜೊತೆ ಚರ್ಚೆ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಚಿತ್ರರಂಗದ ಕೆಲಸ ಸ್ಥಗಿತವಾಗಿದೆ. ದೇಶದಲ್ಲಿ ಇದೇ ಪರಿಸ್ಥಿತಿ ಆಗಿದೆ. ಚಿತ್ರರಂಗಕ್ಕೆ ಇದರಿಂದ ಸಮಸ್ಯೆ ಆಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಚಿತ್ರರಂಗದ ಎಲ್ಲ ವಿಭಾಗಕ್ಕೂ ಸಮಸ್ಯೆ ಆಗಿದೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸೀರಿಯಲ್, ಡ್ರಾಮಾ, ಫಿಲ್ಮ್ ಎಲ್ಲರಿಗೂ ಸಮಸ್ಯೆ ಆಗಿದೆ. ಸಬ್ಸಿಡಿ, ಚಿತ್ರೀಕರಣಕ್ಕೆ ಅವಕಾಶ ಸೇರಿದಂತೆ ಎಲ್ಲಾದರ ಬಗ್ಗೆ ಚರ್ಚೆ ಮಾಡಿದ್ದೇವೆ. ಇವತ್ತು ಡಿಸಿಎಂ ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದೇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಡಿಸಿಎಂ ಜೊತೆ ರಾಯರವಾರ ಗುರುವಾರ ಮಾತಾಡಿ ಖುಷಿಯಾಗಿದೆ ಎಂದು ಶಿವಣ್ಣ ತಿಳಿಸಿದ್ದಾರೆ.

ಅಮೆಜಾನ್ ನಿಂದ ನಮಗೆ ಹೊಡೆತ ಏನಿಲ್ಲ. ಅದರಿಂದಲೂ ಹಣ ಬರುತ್ತಿದೆ. ಡಬ್ಬಿಂಗ್ ಸಮಸ್ಯೆ ಅಲ್ಲ. ಕನ್ನಡ ಚಿತ್ರ ಎಲ್ಲ ಕಡೆ ಗೆಲ್ಲುತ್ತಿದೆ. ನೆಟ್ ಫ್ಲಿಕ್ಸ್, ಅಮೆಜಾನ್‍ನಿಂದ ನಿರ್ಮಾಪಕರಕರಿಗೆ ಸಹಕಾರ ಆಗುತ್ತಿದೆ. ಆದರೆ ಥೀಯೇಟರ್ ಕೊಡಲು ಆಗುವುದಿಲ್ಲ. ಈ ಬಗ್ಗೆ ನಾವು ಗಮನ ಹರಿಸಬೇಕು. ಚಿತ್ರ ಪ್ರದರ್ಶನಕ್ಕೆ ನಾವು ಬೇಡಿಕೆ ಇಟ್ಟಿಲ್ಲ. ಕೊರೊನಾ ಕಡಿಮೆ ಆದ ಮೇಲೆ ಎಲ್ಲವೂ ಪ್ರಾರಂಭ ಆಗುತ್ತೆ. ಚಿತ್ರರಂಗದ ಸಮಸ್ಯೆಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದೇವೆ. ಪ್ಯಾಕೇಜ್ ಅನ್ನೋದಕ್ಕಿಂತ ಸಮಸ್ಯೆ ಪರಿಹಾರ ಆಗಬೇಕು. ಈ ನಿಟ್ಟಿನಲ್ಲಿ ಮನವಿ ಮಾಡಿದ್ದೇವೆ ಎಂದು ಶಿವಣ್ಣ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *