ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ – 22 ಗೇಟ್‍ಗಳ ಮೂಲಕ ನೀರು ಹೊರಕ್ಕೆ

– ತುಂಬಿದ ತುಂಗೆಯಲ್ಲಿ ಐವರು ಸಾಹಸಿಗಳಿಂದ ರ‍್ಯಾಪ್ಟಿಂಗ್

ಶಿವಮೊಗ್ಗ: ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಈಗಾಗಲೇ ಅನೇಕ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಇದೀಗ ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ ಯಾಗಿದ್ದು, ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, 22 ಗೇಟ್‍ಗಳ ಮೂಲಕ 71 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಲೆನಾಡಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯಕ್ಕೆ ಯಥೇಚ್ಛ ನೀರು ಹರಿದು ಬಂದಿದೆ. ಇದರಿಂದ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನೀರಿನ ಮಟ್ಟ 588.24 ಮೀಟರ್‌ಗಿಂತಲೂ ಹೆಚ್ಚು ತಲುಪಿದೆ. ಗಾಜನೂರು ಡ್ಯಾಂ 588.24 ಮೀಟರ್ ಎತ್ತರ ಇದೆ. ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಡ್ಯಾಂಗೆ 70 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ತುಂಬಿದ ತುಂಗೆಯಲ್ಲಿ ಐವರು ಸಾಹಸಿಗಳಿಂದ ರ‍್ಯಾಪ್ಟಿಂಗ್
ಮಲೆನಾಡಿನ ಭಾಗದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿರುವ ಕಾರಣ 71 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ತುಂಬಿ ಹರಿಯುತ್ತಿರುವ ತುಂಗೆಯಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಮತ್ತು ಸಾಹಸಿಗರ ತಂಡದಿಂದ ರ‍್ಯಾಪ್ಟಿಂಗ್ ಆರಂಭಿಸಿದ್ದಾರೆ.

ಮೂರು ಬೋಟಿನಲ್ಲಿ ಐವರು ರ್‍ಯಾಪ್ಟಿಂಗ್‌ನಲ್ಲಿ ಭಾಗವಹಿಸಿದ್ದು, ಶಿವಮೊಗ್ಗದ ತುಂಗಾನದಿ ಹೊಸ ಸೇತುವೆಯಿಂದ ಪಯಣ ಆರಂಭಿಸಿದ್ದಾರೆ. ಈ ಸಾಹಸಿಗರ ತಂಡ ಪ್ರತಿವರ್ಷ ತುಂಗಾನದಿ ಭರ್ತಿಯಾದ ವೇಳೆ ಈ ರೀತಿಯ ಸಾಹಸ ಕಾರ್ಯದಲ್ಲಿ ತೊಡಗುತ್ತಾರೆ. ಅದೇ ರೀತಿ ಈ ಬಾರಿ ಸಹ ಸಾಹಸ ಪಯಣದಲ್ಲಿ ತೊಡಗಿದ್ದಾರೆ. ಶಿವಮೊಗ್ಗದಿಂದ ಹೊರಟು ಹೊನ್ನಾಳಿ ತಾಲೂಕಿನ ರಾಂಪುರಕ್ಕೆ ತೆರಳಲಿದೆ. ಸುಮಾರು 50 ಕಿ.ಮೀ. ಪಯಣ ಇದಾಗಿದೆ.

Comments

Leave a Reply

Your email address will not be published. Required fields are marked *