ಬಾವಿಗೆ ಬಿದ್ದ ಅಜ್ಜಿಯನ್ನು ರಕ್ಷಿಸಿದ ಉಡುಪಿ ಎಸ್.ಐ ಸದಾಶಿವ ಗವರೋಜಿ

ಉಡುಪಿ: ಬಾವಿಗೆ ಬಿದ್ದ ವೃದ್ಧೆಯನ್ನು ನಗರ ಠಾಣೆಯ ಎಸ್‍ಐ ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಗರದ ಹೊರ ವಲಯದ ಮಾರ್ಪಳ್ಳಿ ಎಂಬಲ್ಲಿ ರಕ್ಷಣಾ ಕಾರ್ಯ ನಡೆದಿದೆ.

ಕುಕ್ಕಿಕಟ್ಟೆಯ ವೃದ್ಧೆಯೊರ್ವರು ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಜೀವನ್ಮರಣದ ಸ್ಥಿತಿಯಲ್ಲಿದ್ದರು. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಗಸ್ತಿನಲ್ಲಿದ್ದ ಎಸ್ ಐ ಗೆ ವಾಕಿ ಮೂಲಕ ಸಂದೇಶ ಸಿಕ್ಕಿದೆ. ಉಡುಪಿ ನಗರ ಠಾಣೆಯ ಪಿ.ಎಸ್.ಐ ಸದಾಶಿವ ರಾ. ಗವರೋಜಿ ಕೂಡಲೇ ಸ್ಥಳಕ್ಕಾಗಮಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗಿಳಿಯಲು ಸಿದ್ಧತೆ ಮಾಡುತ್ತಿದ್ದರು. ಎಸ್ ಐ ಸದಾಶಿವ, ವಿನಾಯಕ್ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದರು. ವೃದ್ಧೆಗೆ ಹಗ್ಗ ಕಟ್ಟಿ ಮೇಲೆಳೆಯಲಾಯ್ತು. ಅಜ್ಜಿ ಆರೋಗ್ಯವಾಗಿದ್ದಾರೆ.

ತುರ್ತು ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸದಾಶಿವ ಗವರೋಜಿ, ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಸಾರ್ವಜನಿಕ ರಕ್ಷಣೆ ಕೂಡಾ ನಮ್ಮ ಹೊಣೆ. ಅಸಾಹಯಕ ಸ್ಥಿತಿಯಲ್ಲಿ ಜೀವ ಉಳಿಸಲು ಬಾವಿಗಿಳಿದೆ. ಜೊತೆಗಿದ್ದ ಇಬ್ಬರ ಸಹಾಯದಿಂದ ರಕ್ಷಣೆ ಸಾಧ್ಯ ಆಗಿದೆ ಎಂದರು.

Comments

Leave a Reply

Your email address will not be published. Required fields are marked *