ಮದ್ವೆ ಮಾಡದ್ದಕ್ಕೆ ನಾಲ್ವರು ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ

– ನೆರೆ ಮನೆಗೆ ಓಡಿ ಹೋಗಿ ತಾಯಿ ಬಚಾವ್
– ಅರ್ಧ ಕಿ.ಮೀ ದೂರ ಓಡಿ ಪರಾರಿಯಾಗಲು ಯತ್ನ

ಮಂಗಳೂರು: ಮಾನಸಿಕ ಅಸ್ವಸ್ಥನೊಬ್ಬ ತನ್ನ ನಾಲ್ವರು ರಕ್ತ ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬಾಯಾರು ಎಂಬಲ್ಲಿ ನಡಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆಯಾದ ಕಾಸರಗೋಡಿನ ಬಾಯಾರು ಸಮೀಪದ ಕನಿಯಾಲ ಗುರುಕುಮೇರಿ ಎಂಬಲ್ಲಿ ಈ ಬರ್ಬರ ಹತ್ಯೆ ನಡೆದಿದೆ. ಇಲ್ಲಿನ ಕೃಷಿ ಕೂಲಿ ಕಾರ್ಮಿಕ ಸಹೋದರರಾದ ಬಾಬು (65), ವಿಠಲ (60), ಸದಾಶಿವ (55) ಮತ್ತು ಈ ಮೂವರು ಸೋದರಿ ದೇವಕಿ (58) ಕೊಲೆಯಾದ ದುರ್ದೈವಿಗಳು.

ಕೊಲೆಯಾದ ದೇವಕಿ ಆರೋಪಿ ಉದಯ್‍ನ ಚಿಕ್ಕಮ್ಮನಾಗಿದ್ದು, ಉಳಿದ ಮೂವರು ಆರೋಪಿಯ ಮಾವಂದಿರಾಗಿದ್ದಾರೆ. ಆರೋಪಿ ಉದಯ್ ಅವಿವಾಹಿತನಾಗಿದ್ದು, ಕಳೆದ ಕೆಲ ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತನಗೆ ಮದುವೆ ಮಾಡಿಸಿಲ್ಲ ಎಂದು ತನ್ನ ಸಂಬಂಧಿಗಳೊಂದಿಗೆ ಆಗಾಗ ಆರೋಪಿ ಜಗಳ ಮಾಡುತ್ತಿದ್ದ.

ಕೆಲವು ದಿನಗಳ ಹಿಂದೆ ಆರೋಪಿ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಆದರೆ ಸೋಮವಾರ ರಾತ್ರಿ ಮನೆಗೆ ಬಂದ ಆರೋಪಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದು ಮನೆಯಲ್ಲಿದ್ದವರ ಮೇಲೆ ದಾಳಿ ಮಾಡಿದ್ದಾನೆ. ಆತನ ಏಟಿಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ತನ್ನ ತಾಯಿಯನ್ನೂ ಕೊಲೆ ಮಾಡಲು ಹೋಗಿದ್ದಾನೆ. ಅದೃಷ್ಟವಶಾತ್ ಆರೋಪಿಯ ತಾಯಿ ನೆರೆಮನೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

ನೆರೆಮನೆಯವರು ಆಗಮಿಸುವಷ್ಟರಲ್ಲಿ ಆರೋಪಿ ಸುಮಾರು ಅರ್ಧ ಕಿಲೋಮೀಟರ್ ದೂರ ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಸ್ಥಳೀಯರು ಕಟ್ಟತ್ತಾರಿನಿಂದ ಆತನನ್ನು ಹಿಡಿದು ರಿಕ್ಷಾದಲ್ಲಿ ಮನೆಗೆ ಕರೆ ತಂದಿದ್ದಾರೆ. ಆರೋಪಿ ಮತ್ತೆ ಪರಾರಿಯಾಗಲೆತ್ನಿಸಿದಾಗ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *