ರಾಮ ಮಂದಿರ ಶಿಲನ್ಯಾಸ- ನಾಳೆ ಬೆಂಗಳೂರು, ಮಂಗಳೂರಿನಲ್ಲಿ ಹೈ ಅಲರ್ಟ್

– ಸೆಕ್ಷನ್ 144 ಜಾರಿ, ಸಂಘಟನೆಗಳ ಮೇಲೆ ನಿಗಾ

ಬೆಂಗಳೂರು/ಮಂಗಳೂರು: ಆಗಸ್ಟ್ 5ರಂದು ಅಂದರೆ ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಧಾನಿ ಮೋದಿ ಸಹ ಭಾಗವಹಿಸುತ್ತೊದ್ದಾರೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.

ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ಇಂದು ರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ. ಅಲ್ಲದೆ ಕೆಲ ಸಂಘಟನೆ, ಹೋರಾಟಗಾರರ ಮೇಲೆ ನಿಗಾ ವಹಿಸಲಾಗಿದೆ. ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆಗೆ ಅನುಮತಿ ಇಲ್ಲ. ಕೋಮು ಸೌಹಾರ್ಧತೆಗೆ ಧಕ್ಕೆ ತರುವವರು ಕಂಡುಬಂದರೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಯಾವುದೇ ದೇವಸ್ಥಾನ, ಮಸೀದಿಗಳಲ್ಲಿ ಬಾವುಟ ಕಟ್ಟುವಂತಿಲ್ಲ. ಅಲ್ಲದೆ ಜನನಿಬಿಡ ಪ್ರದೇಶ, ಮಾಲ್, ದೇವಸ್ಥಾನ, ಮೆಜೆಸ್ಟಿಕ್, ಮಾರ್ಕೆಟ್ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ.

ಹಿಂದೂಪರ ಸಂಘಟನೆ, ಹಿಂದೂಯೇತರ ಸಂಘಟನೆಗಳ ಮೇಲೆ ನಿಗಾ ವಹಿಸಲಾಗಿದೆ. ಸಿಎಆರ್ ಮತ್ತು ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆಯಾಗಿ ಸಿಲಿಕಾನ್ ಸಿಟಿಯಲ್ಲಿ ನಾಳೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಇತ್ತ ಮಂಗಳೂರಿನಲ್ಲೂ ನಾಳೆ 144 ಸೆಕ್ಷನ್ ಜಾರಿಯಾಗಲಿದೆ. ಒಂದು ಸಂಘಟನೆಯಿಂದ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದ್ದು, ಇದಕ್ಕೆ ವಿರುದ್ಧವಾಗಿ ಮತ್ತೊಂದು ಸಂಘಟನೆಯಿಂದ ಪ್ರತಿಭಟನೆಗೆ ಪ್ಲ್ಯಾನ್ ನಡೆದಿದೆ. ಈ ಹಿನ್ನೆಲೆ ಮುಂದಾಗುನ ಅನಾಹುತ ತಡೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

Comments

Leave a Reply

Your email address will not be published. Required fields are marked *