– ಇಂದು ಸಂಜೆ ಹೊರಡಲು ಸಕಲ ಸಿದ್ಧತೆಗಳಾಗಿವೆ
ಚಿತ್ರದುರ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಮಸ್ತ ಭಾರತೀಯರ ಭಾವನೆಗಳ ಪ್ರತೀಕ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮಾದಾರಚನ್ನಯ್ಯ ಗುರುಪೀಠದಲ್ಲಿ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನಮಗೂ ಆಹ್ವಾನ ಬಂದಿದೆ. ಈ ಹಿನ್ನಲೆ ಇಂದು ಅಯೋಧ್ಯೆಗೆ ತೆರಳಲು ಸಕಲಸಿದ್ಧತೆಗಳಾಗಿವೆ. ಐತಿಹಾಸಿಕ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದು ಸಂತೋಷ ತಂದಿದೆ. ಇಂದು ಸಂಜೆ ಅಯೋಧ್ಯೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸಾಕ್ಷೀಕರಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದರು.
ರಾಮಮಂದಿರ ನಿರ್ಮಾಣದ ಈ ಸುವರ್ಣ ಸಮಯಕ್ಕೆ ದೇಶದ ಜನ ಕಾತುರರಾಗಿದ್ದಾರೆ. ಹೀಗಾಗಿ ರಾಮಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ. ಅಯೋಧ್ಯೆಗೆ ನಮ್ಮೊಂದಿಗೆ ರಾಜ್ಯದ 8 ಜನ ಗಣ್ಯರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗಿದೆ ಎಂಬ ಮಾಹಿತಿ ಇದೆ. ರಾಮ ಮಂದಿರದ ಹೋರಾಟ ಹುಟ್ಟಿದ ಸಂದರ್ಭದಲ್ಲಿ ನಾವೇ ಹುಟ್ಟಿರಲಿಲ್ಲ ಆದರೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಾವುಗಳು ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ದೇಶದಲ್ಲಿ ನಂಬಿಕೆಗಳ ಆಧಾರದ ಮೇಲೆ ಆಚರಣೆಗಳು ನಡೆಯುತ್ತವೆ. ಅಯೋಧ್ಯೆ ಎಂದರೆ ನಂಬಿಕೆಗಳ ಕರ್ಮಭೂಮಿ ಎಂಬ ಭಾವನೆ ಎಲ್ಲರಲ್ಲಿದೆ. ಇಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಈವರೆಗೆ ಭಾಗಿ ಆಗಿದ್ದೇವೆ. ಹೀಗಾಗಿ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ಪ್ರತ್ಯೇಕವಾಗಿ ಚಿಂತನೆ ಮಾಡುವಂಥದ್ದೇನು ಇಲ್ಲ ಎಂದರು.

Leave a Reply