ಹೊಸ ಶಿಕ್ಷಣ ನೀತಿಯಲ್ಲಿ ಚೀನಿ ಭಾಷೆಗೆ ಕೊಕ್

– ಕಳೆದ ವರ್ಷದ ಕರಡಿನಲ್ಲಿ ಚೀನಿ ಭಾಷೆ ಇತ್ತು
– ಹೊಸ ಶಿಕ್ಷಣ ನೀತಿಯ ಕರಡಿನಲ್ಲಿ ಉಲ್ಲೇಖಿಸದ ಕೇಂದ್ರ

ನವದೆಹಲಿ: ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್‍ಇಪಿ)ನ್ನು ಜಾರಿಗೆ ತಂದಿದ್ದು, ಇದರಲ್ಲಿ ಚೀನಿ ಭಾಷೆಯ ಕುರಿತು ಯಾವುದೇ ರೀತಿಯ ಉಲ್ಲೇಖವಿಲ್ಲ.

ಹೊಸ ಶಿಕ್ಷಣ ನೀತಿಯ ಕರಡು ಪ್ರತಿಯ ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಚೀನಿ ಭಾಷೆಯ ಕುರಿತು ಯಾವುದೇ ಉಲ್ಲೇಖವಿಲ್ಲ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಶ್ವದ ಜ್ಞಾನ ತಿಳಿಯಲು, ಆಯ್ದ ದೇಶಗಳ ಭಾಷೆಗಳನ್ನು ಕಲಿಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಅವರ ಆಸಕ್ತಿಗೆ ತಕ್ಕಂತೆ ತಮಗೆ ಬೇಕಾದ ದೇಶದ ಭಾಷೆಯನ್ನು ಕಲಿಯಬಹುದಾಗಿದೆ.

ಕಳೆದ ವರ್ಷದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನೀಸ್ ಜೊತೆ ಚೀನಿ ಭಾಷೆಯನ್ನೂ ಸೇರಿಸಲಾಗಿತ್ತು. ವಿದ್ಯಾರ್ಥಿಗಳು ತಮಗಿಷ್ಟದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ರಮೇಶ್ ಪೊಖ್ರಿಯಾಲ್ ಬಿಡುಗಡೆ ಮಾಡಿರುವ ಎನ್‍ಇಪಿಯ ಅಂತಿಮ ಕರಡಿನಲ್ಲಿ ಕೊರಿಯನ್‌, ರಷ್ಯನ್, ಪೊರ್ಚುಗೀಸ್ ಹಾಗೂ ಥಾಯ್ ಭಾಷೆಗಳನ್ನು ಆಯ್ಕೆಗೆ ನೀಡಲಾಗಿದೆ. ಈ ಪಟ್ಟಿಯಿಂದ ಚೀನಿ ಭಾಷೆಯನ್ನು ತೆಗೆಯಲಾಗಿದೆ.

ಶಾಲೆಗಳು ಕಲಿಸಬಹುದಾದ ವಿದೇಶಿ ಭಾಷೆಗಳ ಉದಾಹರಣೆಗಳ ಪಟ್ಟಿಯಿಂದ ಚೀನಿ ಭಾಷೆಯನ್ನು ತೆಗೆಯಲಾಗಿದೆ. ಈ ಭಾಷೆಯನ್ನು ಶಾಲಾ ಮಟ್ಟದಲ್ಲಿ ಕಲಿಸಬಾರದೆ ಎಂಬುದರ ಕುರಿತು ಸ್ಪಷ್ಟವಾಗಿ ಹೇಳಲಾಗಿಲ್ಲ. ಚೀನಾದೊಂದಿಗಿನ ಗಡಿ ವಿವಾದ ಹಾಗೂ ಆ್ಯಪ್‍ಗಳ ನಿಷೇಧದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಗಲ್ವಾನ್ ವ್ಯಾಲಿಯಲ್ಲಿ ನಡೆದ ಘರ್ಷಣೆ ವೇಳೆ ಚೀನಾ ಸೈನಿಕರು ನಡೆಸಿದ ಗುಂಡಿನ ದಾಳಿಗೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಇದಾದ ಬೆನ್ನಲ್ಲೇ ಸರ್ಕಾರ ಚೀನಾ ಜೊತೆ ಮಾತುಕತೆ ನಡೆಸಿದ್ದು, ಇದರ ನಡುವೆಯೇ ಚೀನಾ ಆ್ಯಪ್‍ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಸಾರ್ವಭೌತ್ವ ಹಾಗೂ ಭದ್ರತೆಯ ದೃಷ್ಟಿಯಿಂದ ಆ್ಯಪ್‍ಗಳನ್ನು ನಿಷೇಧಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮೊದಲು ಟಿಕ್ ಟಾಕ್ ಸೇರಿ 59 ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿತ್ತು. ನಂತರ ಮತ್ತೆ ಈ ವಾರ 47 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *