ಸೋಂಕಿತರ ಸಾವು ಹೆಚ್ಚಾಗಲು ಕಾರಣವೇನು?- ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಸಿಡಿಮಿಡಿ

ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆಗೆ ಕಳೆದೊಂದು ವಾರಗಳಿಂದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವೇನು ಎಂದು ಸಚಿವ ಈಶ್ವರಪ್ಪ ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಮತ್ತು ವೈದ್ಯರು ಹಾಗೂ ನಿರ್ದೇಶಕರ ಜೊತೆ ಸಭೆ ನಡೆಸಿದ ಸಚಿವರು, ಸೋಂಕಿತ ಚಿಕಿತ್ಸೆ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವೈದ್ಯರು ಸಲಹೆ, ಸೂಚನೆ ನೀಡಿ, ಸಿಬ್ಬಂದಿ ಕೊರತೆ ನೀಗಿಸಿ. ಡಿ ಗ್ರೂಪ್ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ ಗಳು, ವೆಂಟಿಲೇಟರ್ ಗಳ ಕೊರತೆ, ಆಕ್ಸಿಜನ್, ಬೆಡ್‍ಗಳ ಕೊರತೆ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಈಶ್ವರಪ್ಪ ಸೂಚನೆ ನೀಡಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೂಲಭೂತ ಸೌಲಭ್ಯದ ಕೊರತೆ ಮತ್ತು ವೈದ್ಯರಿಂದ ನಿರ್ಲಕ್ಷ್ಯ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಯಾವ ರೀತಿ ಕ್ರಮಕೈಗೊಳ್ಳಬೇಕೆಂಬ ಬಗ್ಗೆ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲು ಸೂಚಿಸಲಾಯಿತು.

ಕೊರೊನಾ ವಾರಿಯರ್ಸ್ ಗಳಾದ ವೈದ್ಯರು ಮತ್ತು ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಗೆ ಪಾಸಿಟಿವ್ ಬಂದಾಗ ಚಿಕಿತ್ಸೆ ಪಡೆಯಲು ಪ್ರತ್ಯೇಕ ವಾರ್ಡ್ ಅವಶ್ಯಕತೆ ಇದೆ. ಈ ಬಗ್ಗೆ ಸಭೆಯಲ್ಲಿ ಸಿಮ್ಸ್ ಸಿಬ್ಬಂದಿ ಸಚಿವರ ಗಮನಕ್ಕೆ ತಂದರು. ಲೋಪದೋಷಗಳು ಸೇರಿದಂತೆ, ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಮ್ಸ್ ಆಡಳಿತ ಮಂಡಳಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.

ಕೋವಿಡ್ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರು ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿ ದೂರನ್ನು ಶಾಸಕರೇ ಬಗೆಹರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರು ತಮ್ಮ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಈಗಾಗಲೇ 450 ಬೆಡ್ ಗಳ ವ್ಯವಸ್ಥೆ ಕೋವಿಡ್ ಮತ್ತು ನಾನ್ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಹೆಚ್ಚಿನ ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಸಚಿವರಿಗೆ ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *