ಬೈಕ್ ಏರಿ, ಟಾರ್ಚ್ ಹಿಡಿದು ಕತ್ತಲಲ್ಲಿ ಕಾಡಿಗೆ ನುಗ್ಗಿದ ‘ಹೆಬ್ಬುಲಿ’

– ಬನ್ನಿ ಈ ಪ್ರಯಾಣದಲ್ಲಿ ಜೊತೆಯಾಗಿ

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು, ಸದ್ಯ ಅವರು ನಟಿಸುತ್ತಿರುವ ಫ್ಯಾಂಟಮ್ ಚಿತ್ರದಿಂದ ಒಂದು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದ ಚಿತ್ರರಂಗ ಸ್ತಬ್ಧವಾಗಿತ್ತು. ಆದರೆ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸಿನಿಮಾ ಶೂಟಿಂಗ್‍ಗೆ ಅನುಮತಿ ನೀಡಲಾಗಿತ್ತು. ಹೀಗಾಗಿ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರತಂಡ ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಹೋಗಿತ್ತು. ಜೊತೆಗೆ ಅಲ್ಲಿ ಕಾಡಿನ ಅದ್ಧೂರಿ ಸೆಟ್ ಹಾಕಿ ಸಿನಿಮಾದ ಶೂಟಿಂಗ್ ಆರಂಭಿಸಿತ್ತು.

ಕಳೆದ ವಾರವಾಷ್ಟೇ ಫ್ಯಾಂಟಮ್ ಚಿತ್ರತಂಡ ಒಂದು ಚಿಕ್ಕ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕಿಚ್ಚ ಸುದೀಪ್ ಮತ್ತು ಒಂದು ಚಿಕ್ಕ ಮಗು ಮಾತ್ರ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಈ ದೃಶ್ಯದಲ್ಲಿನ ಹಿನ್ನೆಲೆ ಸಂಗೀತಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಇಂದು ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಇನ್ನೊಂದು ದೃಶ್ಯವನ್ನು ಹಂಚಿಕೊಂಡಿದ್ದು, ಇದರಲ್ಲಿ ಬೈಕಿನಲ್ಲಿ ಬರುವ ಕಿಚ್ಚ ನಂತರ ಟಾರ್ಚ್ ಹಿಡಿದು ಏನನ್ನೋ ಹುಡುಕುತ್ತಾ ಕಾಡಿನೊಳಗೆ ಹೋಗುವುದನ್ನು ನಾವು ಕಾಣಬಹುದು. ಈ ದೃಶ್ಯದ ಹಿನ್ನೆಲೆ ಸಂಗೀತ ಕೂಡ ಸಖತ್ ಕ್ಯಾಚಿಯಾಗಿದೆ.

ಇಂದು ಮಧ್ಯಾಹ್ನ ಈ ವಿಚಾರವಾಗಿ ಮೊದಲು ಟ್ವೀಟ್ ಮಾಡಿದ್ದ ಕಿಚ್ಚ, ಗುರುವಾರ ಚಿತ್ರೀಕರಣಗೊಂಡ ಒಂದು ಸಣ್ಣ ದೃಶ್ಯವನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಈ ವಿಡಿಯೋ ನಿಮ್ಮನ್ನು ಫ್ಯಾಂಟಮ್ ಎಂಬ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದ್ದರು. ಇದಾದ ಕೆಲವೇ ನಿಮಿಷದಲ್ಲಿ ವಿಡಿಯೋವನ್ನು ಶೇರ್ ಮಾಡಿರುವ ಕಿಚ್ಚ, ಇದು ಕೇವಲ ಒಂದು ತುಣುಕು ಅಷ್ಟೇ ಇದು ನನ್ನ ಅಭಿಮಾನಿಗಳಿಗಾಗಿ ಎಂದು ಬರೆದುಕೊಂಡಿದ್ದಾರೆ.

ಸುದೀಪ್ ಅವರು ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಕಮೆಂಟ್ ಮಾಡಿರುವ ಅವರ ಅಭಿಮಾನಿಗಳು, ವಿಡಿಯೋ ಮೇಕಿಂಗ್ ಚೆನ್ನಾಗಿದೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ ಎಂದಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿ ಕಮೆಂಟ್ ಮಾಡಿರುವ ಸುದೀಪ್ ಅವರ ಅಭಿಮಾನಿಯೋರ್ವ ಇದು ಒಂದು ಹಾರರ್ ಚಿತ್ರವೇ? ನೀವು ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡುತ್ತಿದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಟ್ವೀಟ್ ಮಾಡಿದ ಕಿಚ್ಚ ಇದು ಹಾರರ್ ಸಿನಿಮಾ ಅಲ್ಲ ಎಂದು ಉತ್ತರಿಸಿದ್ದಾರೆ.

ಫ್ಯಾಂಟಮ್ ಚಿತ್ರ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣಾ ಪಾತ್ರ ಈಗಾಗಲೇ ಭಾರೀ ಮೆಚ್ಚುಗೆ ಪಡೆದಿದೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗುಡೆಯಾಗಿರುವ ಪೋಸ್ಟರ್ ನಲ್ಲಿ ಸುದೀಪ್‌ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, `ವಿಕ್ರಾಂತ್ ರೋಣ’ನ ಖಡಕ್ ಲುಕ್‍ನ ನೋಡೋದಕ್ಕೆ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *