ನನ್ನ ಅಳಿಲು ಸೇವೆಯನ್ನು ಸಿದ್ದರಾಮಯ್ಯ ಸಹ ಮರೆತಿಲ್ಲ ಎಂದು ಭಾವಿಸಿದ್ದೇನೆ: ಸುಧಾಕರ್

– ಮಂದುವರಿದ ಮಾಜಿ ಗುರು ಶಿಷ್ಯರ ಟ್ವೀಟ್ ವಾರ್

ಬೆಂಗಳೂರು: ನನ್ನ ಅಳಿಲು ಸೇವೆಯನ್ನು ಸಿದ್ದರಾಮಯ್ಯ ಅವರು ಸಹ ಮರೆತಿಲ್ಲ ಎಂದು ಭಾವಿಸಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಅವರು ಸಿದ್ದುಗೆ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೊರೊನಾ ವಿಚಾರದಲ್ಲಿ ಅವ್ಯವಾರವಾಗಿದೆ ಎಂದು ನಿನ್ನೆ ಸಿದ್ದರಾಮಯ್ಯ ಆರೋಪಿಸಿದ್ದರು. ನಂತರ ಪ್ರಸ್ತಾವನೆಗೂ ಮಂಜೂರಾತಿಗೂ ಸಿದ್ದರಾಮಯ್ಯ ಅವರಿಗೆ ವ್ಯತ್ಯಾಸ ಗೊತ್ತಿಲ್ಲ ಎಂದು ಸುಧಾಕರ್ ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಇಂದು ಮತ್ತೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಅದನ್ನು ತಿಳಿದುಕೊಳ್ಳದೇ 13 ಬಾರಿ ಬಜೆಟ್ ಮಂಡಿಸಿಲ್ಲ ಎಂದು ಟಾಂಗ್ ನೀಡಿದ್ದರು. ಇದನ್ನೂ ಓದಿ: ನಂಗೇ ಪಾಠ ಹೇಳಿಕೊಡೋದಾ?, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿದ್ದಾರೆ: ಸಿದ್ದು

ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುಧಾಕರ್, ಮಾನ್ಯ ಸಿದ್ದರಾಮಯ್ಯನವರು ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ ಮತ್ತು ನನಗೆ ಉಪಕಾರ ಸ್ಮರಣೆ ಇರಬೇಕು ಎಂದಿದ್ದಾರೆ. ಅವರು ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ. ನನ್ನ ಅಳಿಲು ಸೇವೆಯನ್ನು ಅವರೂ ಸಹ ಮರೆತಿಲ್ಲ ಎಂದು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಸುಧಾಕರ್, ಕಳೆದ 5 ತಿಂಗಳಿನಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತು ಕಾರ್ಯ ಕ್ಷಮತೆಯಿಂದ ಅವಿರತವಾಗಿ ಶ್ರಮಿಸುತ್ತಿದ್ದೇನೆ. ಇಂಥ ಸನ್ನಿವೇಶದಲ್ಲಿ ನನ್ನ ಇಲಾಖೆಯ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳು ಬಂದಿವೆ. ಅವರ ಆರೋಪಗಳಿಗೆ ಜವಾಬ್ದಾರಿಯುತವಾಗಿ ವಾಸ್ತವಾಂಶವನ್ನು ಜನರ ಮುಂದಿಟ್ಟಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ನಿಂದನೆ ಅಥವಾ ಅಪಹಾಸ್ಯದ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *