ಐಪಿಎಲ್ 2020ರ ಆವೃತ್ತಿಗೆ ಮನೆಯಿಂದಲೇ ಕಾಮೆಂಟರಿ!

ಮುಂಬೈ: ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್‍ನಲ್ಲಿ ಸಾಕಷ್ಟು ಬದಲಾವಣೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಆಟಗಾರರು ಚೆಂಡಿಗೆ ಎಂಜಲು ಉಜ್ಜುವುದನ್ನು ಐಸಿಸಿ ನಿಷೇಧ ಮಾಡಿತ್ತು. ಅಲ್ಲದೇ ಆಟಗಾರರು ಹ್ಯಾಂಡ್ ಶೇಕ್ ಮಾಡುವುದರಿಂದಲೂ ದೂರ ಉಳಿದಿದ್ದರು. ಸದ್ಯ ಐಪಿಎಲ್ ಟೂರ್ನಿಗೆ ಮನೆಯಿಂದಲೇ ಕಾಮೆಂಟರಿ ನೀಡುವ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಚಿಂತನೆ ನಡೆಸಿದೆ.

ದುಬೈನಲ್ಲಿ ಸೆ.26ರಿಂದ ನ.08ರ ಅವಧಿಯಲ್ಲಿ ಐಪಿಎಲ್ ನಡೆಯುವ ಸೂಚನೆಗಳು ಲಭಿಸುತ್ತಿವೆ. 44 ದಿನಗಳ ಅವಧಿಯಲ್ಲಿ 60 ಪಂದ್ಯ ಆಯೋಜಿಸಲು ಸಿದ್ಧತೆ ನಡೆದಿದೆ. ಅಲ್ಲದೇ ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ತಮಿಳು, ಬೆಂಗಾಳಿ ಭಾಷೆಯಲ್ಲಿ ವರ್ಚುವಲ್ ಕಾಮೆಂಟರಿ ನೀಡಲಾಗುತ್ತಿದೆ. ಆದರೆ ಬಯೋಸೆಕ್ಯೂರ್ ವಾತಾವರಣದಲ್ಲಿ ಪಂದ್ಯ ನಡೆಯುವ ಸಾಧ್ಯತೆ ಇರುವುದಿಂದ ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಸಾಧ್ಯವಿದೆಯೇ ಎಂದು ಸ್ಟಾರ್ ಸ್ಪೋರ್ಟ್ಸ್ ಪರಿಶೀಲಿಸುತ್ತಿದೆ. ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕವಿವರಣೆ ನೀಡುವವರನ್ನು ಮನೆಯಿಂದಲೇ ಕಾಮೆಂಟರಿ ನೀಡುವಂತೆ ಮಾಡಲು ಚಿಂತನೆ ನಡೆಸಿದೆಯಂತೆ.

ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ನಡೆದಿದ್ದ 3ಟಿಸಿ ಸಾಲಿಡಾರಿಟಿ ಕಪ್‍ಗೆ ಭಾರತದಿಂದಲೇ ಮೂವರು ಕಾಮೆಂಟಿ ನೀಡಿದ್ದರು. ಬರೋಡಾದಿಂದ ಇರ್ಫಾನ್ ಪಠಾಣ್, ಮುಂಬೈನಿಂದ ಸಂಜಯ್ ಮಂಜ್ರೇಕರ್, ಕೋಲ್ಕತ್ತಾದಿಂದ ದೀಪ್ ದಾಸ್ ಗುಪ್ತಾ ತಮ್ಮ ಮನೆಯಿಂದಲೇ ಕಾಮೆಂಟರಿ ನೀಡಿದ್ದರು. ಈ ವರ್ಚುವಲ್ ಕಾಮೆಂಟರಿ ಯಶಸ್ವಿಯಾದ ಕಾರಣ ಐಪಿಎಲ್ 2020ರ ಟೂರ್ನಿಗೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಸ್ಟಾರ್ ಸ್ಪೋರ್ಟ್ಸ್ ಚಿಂತನೆ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಇರ್ಫಾನ್ ಪಠಾಣ್, ಇಂಟರ್ ನೆಟ್ ವೇಗ ಮತ್ತು ತಾಂತ್ರಿಕ ಸಮಸ್ಯೆ ಎದುರಾದರೇ ಕಾಮೆಂಟ್ರಿಯಲ್ಲಿ ಸ್ಪಷ್ಟತೆ ಲಭಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *