ಉತ್ತರ ಕನ್ನಡದಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ

ಕಾರವಾರ: ಕೊರೊನಾ ಸೋಂಕಿಗೆ ಒಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ ನಲ್ಲಿ ಶಿರಸಿ ತಾಲೂಕಿನ 76 ವರ್ಷದ ವೃದ್ಧ ಹಾಗೂ ಭಟ್ಕಳದ 65 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶಿರಸಿ ತಾಲೂಕಿನ 76 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕೊರೊನಾ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯಿಂದ ಕ್ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಭಟ್ಕಳದ 65 ವರ್ಷದ ವೃದ್ಧೆ ಸಹ ಉಸಿರಾಟದ ಸಮಸ್ಯೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಕ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇವರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಇಂದು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಜಿಲ್ಲೆಯಲ್ಲಿ ಒಟ್ಟು 10 ಜನ ಸಾವನ್ನಪ್ಪಿದ್ದರು. ಇದೀಗ ಇವರಿಬ್ಬರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಬಹುತೇಕರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದವರೇ ಆಗಿದ್ದಾರೆ.

ಇವರ ಅಂತಿಮ ಸಂಸ್ಕಾರವನ್ನು ಅವರ ತಾಲೂಕಿನಲ್ಲಿಯೇ ಸಂಬಂಧಿಕರ ಸಮ್ಮುಖದಲ್ಲಿ ಕೋವಿಡ್-19 ನಿಯಮಾನುಸಾರ ನೆರವೇರಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

Comments

Leave a Reply

Your email address will not be published. Required fields are marked *