ಕೊರೊನಾ ಸೋಂಕಿಗೆ ಅರ್ಜುನ ಪ್ರಶಸ್ತಿ ವಿಜೇತ ಪ್ಯಾರಾ ಬ್ಯಾಡ್ಮಿಂಟನ್ ಪ್ಲೇಯರ್ ಬಲಿ

ಬೆಂಗಳೂರು: ಕೊರೊನಾ ವೈರಸ್‍ನಿಂದ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ರಮೇಶ್ ಟಿಕಾರಾಂ (51) ಬೆಂಗಳೂರಿನಲ್ಲಿ ಆವನ್ನಪ್ಪಿದ್ದಾರೆ.

ಭಾರತ ಪ್ಯಾರಾ ಬಾಡ್ಮಿಂಟನ್ ಸಂಘದ ಅಧ್ಯಕ್ಷ ಎನ್‍ಸಿ ಸುಧೀರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಜೂನ್ 29 ರಂದು ಜ್ವರ, ಕೆಮ್ಮಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ರಮೇಶ್ ಸಾವನ್ನಪ್ಪಿದ್ದರು. ಪರೀಕ್ಷೆ ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ಸುಧೀರ್ ಅವರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಪರಿಣಾಮ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಅವರು ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇತ್ತ ರಮೇಶ್ ಅವರ ನಿಧನಕ್ಕೆ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಾಪ ಸೂಚಿಸಿದ್ದಾರೆ.

ಶಾಟ್‍ಪುಟ್, ಜಾವೆಲಿನ್ ಥ್ರೋ ಆಯ್ಕೆ ಮಾಡಿಕೊಂಡು ಕೆರಿಯರ್ ಆರಂಭಿಸಿದ್ದ ರಮೇಶ್ ಅವರು 1995ರ ನಾಟಿಂಗ್‍ಹ್ಯಾಮ್‍ನಲ್ಲಿ ನಡೆದಿದ್ದ ಇಂಟರ್ ನ್ಯಾಷನಲ್ ಮೆಟ್‍ನಲ್ಲಿ ಪದಕ ಪಡೆದಿದ್ದರು. ಆ ಬಳಿಕ ಸಿಡ್ನಿಯಲ್ಲಿ ನಡೆದಿದ್ದ ಚಾಂಪಿಯನ್‍ಷಿಪ್‍ನಲ್ಲಿ ಶಾಟ್‍ಪುಟ್‍ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಬಳಿಕ ಬ್ಯಾಟ್ಮಿಂಟನ್ ವೃತ್ತಿಯಾಗಿ ಆಯ್ಕೆ ಮಾಡಿಕೊಂಡ ರಮೇಶ್ ಅವರಿಗೆ 2002ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು. 2001ರ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಲು ರಮೇಶ್ ಟಿಕಾರಾಂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.

Comments

Leave a Reply

Your email address will not be published. Required fields are marked *