ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ನೀಡಿ: ಅಮಿತ್ ಶಾಗೆ ರಿಯಾ ಮನವಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ನಟಿ ರಿಯಾ ಚಕ್ರವರ್ತಿ ಕೇಂದ್ರ ಗೃಹಸಚಿವ ಅಮಿತ್ ಶಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ರಿಯಾ ಟ್ವೀಟ್: ಮಾನ್ಯ ಅಮಿತ್ ಶಾ ಅವರೇ, ನಾನು ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ. ಸುಶಾಂತ್ ನಿಧನವಾಗಿ ಒಂದು ತಿಂಗಳಕ್ಕೂ ಅಧಿಕ ಸಮಯ ಕಳೆದಿದೆ. ನನಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ಸುಶಾಂತ್ ಯಾವ ಕಾರಣಕ್ಕಾಗಿ ಇಂತಹ ನಿರ್ಧರ ತೆಗೆದುಕೊಂಡ ಎಂಬ ವಿಷಯ ಬಹಿರಂಗವಾಗಬೇಕಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಾವಿನ ಒಂದು ತಿಂಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಸಾಲು ಸಾಲು ಪೋಸ್ಟ್ ಮಾಡುತ್ತಿದ್ದಾರೆ. ಜುಲೈ 14 ರಂದು ಸುಶಾಂತ್ ಜೊತೆಗಿನ ಫೋಟೋ ಹಂಚಿಕೊಂಡು ಹೃದಯಕ್ಕಾದ ಗಾಯ ಇನ್ನೂ ಆರಿಲ್ಲ ಎಂಬ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಇದಕ್ಕೂ ಮೊದಲು ತಮಗೆ ರೇಪ್ ಮತ್ತು ಕೊಲೆ ಬೆದರಿಕೆ ಹಾಕಿದ್ದ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡು ಕಿಡಿಗೇಡಿಗಳಿಗೆ ತಿರುಗೇಟು ನೀಡಿದ್ದರು.

ಜೂನ್ 14ರಂದು ಸುಶಾಂತ್ ಶವ ಮನೆಯಲ್ಲಿ ಪತ್ತೆಯಾಗಿತ್ತು. ಜೂನ್ 14 ರಂದು ಬೆಳಗ್ಗೆ ಸುಮಾರು 9.30ಕ್ಕೆ ಜ್ಯೂಸ್ ಕುಡಿದು ಕೋಣೆ ಸೇರಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *