ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಇಲ್ಲ- ಎಲ್ಲಾ ವಿದ್ಯಾರ್ಥಿಗಳು ಪಾಸ್

ಬೆಂಗಳೂರು: ಜುಲೈ 16 ರಿಂದ 27ರವರೆಗೆ ನಿಗಧಿಯಾಗಿದ್ದ ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಪ್ರಥಮ ಪಿಯುಸಿ ಪೂರಕ ಪರೀಕ್ಷೆ ದಿನಾಂಕವನ್ನು ಜುಲೈ 16-27 ವರೆಗೆ ನಿಗದಿ ಮಾಡಲಾಗಿತ್ತು. ಅಲ್ಲದೇ ಸುಮಾರು 60 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಿದ್ದು ಕಾಲೇಜು ಹಂತದಲ್ಲಿ ಪರೀಕ್ಷೆಗಳನ್ನು ನಿರ್ವಹಿಸಿ ಇದೇ 30 ರಂದು ಫಲಿತಾಂಶವನ್ನು ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಸದ್ಯ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳ ಪರೀಕ್ಷೆಯನ್ನು ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಉಳಿದಂತೆ ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಪಡೆಯಲು ಅವಶ್ಯಕತೆಯಿರುವ ಕನಿಷ್ಠ ಅಂಕಗಳನ್ನು ಕಾಲೇಜು ಹಂತದಲ್ಲಿಯೇ ನೀಡಲಾಗುವುದು. ಹಾಜರಾತಿ ಕೊರತೆಯಿಲ್ಲದ, ಅನಿವಾರ್ಯ ಸಂದರ್ಭದಲ್ಲಿ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳು ಪ್ರಾರಂಭವಾದ ಬಳಿಕ ದ್ವಿತೀಯ ಪಿಯುಸಿ ಪ್ರಥಮ ಕಿರುಪರೀಕ್ಷೆಗೂ ಪೂರ್ವದಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣವಾದ ವಿಷಯಗಳಿಗೆ ಮತ್ತೊಮ್ಮೆ ಕಾಲೇಜು ಹಂತದಲ್ಲಿ ಕಿರುಪರೀಕ್ಷೆಯನ್ನು ನಡೆಸಿ ಅವರ ಕಲಿಕೆಯ ಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದೆಂದು ಸಚಿವರು ಹೇಳಿದ್ದಾರೆ. ಆದರೆ ಹಾಜರಾತಿಯ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಳ್ಳುವರು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *