ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

-ಅಪಾಯದಂಚಿನಲ್ಲಿ 10 ಮನೆಗಳು

ಮಡಿಕೇರಿ : ಕಳೆದ ಎರಡು ವರ್ಷಗಳಿಂದ ಕೊಡಗಿಗೆ ಪ್ರಕೃತಿ ಹೊಡೆತದ ಮೇಲೆ ಹೊಡೆತ ನೀಡುತ್ತಲೇ ಇದೆ. ಕಳೆದ ಬಾರಿಯ ಭಾರೀ ಮಳೆಯಿಂದ ತಡೆಗೋಡೆಯೊಂದು ಕುಸಿದು ಮನೆಯೊಂದು ಸಂಪೂರ್ಣ ನೆಲಸಮವಾಗಿತ್ತು. ಆದರೀಗ ಮತ್ತದೇ ಸ್ಥಳದಲ್ಲಿ ಭಾರೀ ಭೂಕುಸಿತವಾಗುವ ಆತಂಕದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ.

ವಿರಾಜಪೇಟೆಯ ನೆಹರು ನಗರ ಬಡಾವಣೆಯಲ್ಲಿ ಕಳೆದ ಬಾರಿಯ ಮಳೆ ಸಂದರ್ಭ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿತ್ತು. ಪರಿಣಾಮವಾಗಿ ಮಹಿಳೆಯೊಬ್ಬರ ಮನೆಯ ಮೇಲೆ ತಡೆಗೋಡೆ ಬಿದ್ದು, ಇಡೀ ಮನೆ ನೆಲಸಮವಾಗಿತ್ತು. ಮಳೆಗಾಲದ ಬಳಿಕ ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಮತ್ತೊಂದು ಮಳೆಗಾಲ ಆರಂಭವಾದರೂ ತಡೆಗೋಡೆ ನಿರ್ಮಿಸಿಲ್ಲ.

ತಡೆಗೋಡೆ ನಿರ್ಮಿಸುವದಕ್ಕಾಗಿ ಬೇಸಿಗೆಯಲ್ಲೇ ದೊಡ್ಡ ಪ್ರಮಾಣದ ಅಡಿಪಾಯವನ್ನು ತೆಗೆದಿದ್ದಾರೆ. ಆದರೆ ಲಾಕ್‍ಡೌನ್ ಆಗಿದ್ದರಿಂದ ಅಷ್ಟಕ್ಕೆ ಕೆಲಸ ಸಂಪೂರ್ಣ ಸ್ಥಗಿತವಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು ಸುಮಾರು ಇಪ್ಪತ್ತು ಅಡಿಗೂ ಹೆಚ್ಚು ಎತ್ತರದ ಭೂಮಿ ಕುಸಿಯುವ ಭೀತಿ ಇದೆ.

ಕಳೆದ ವರ್ಷವೇ ಭೂಮಿ ಕುಸಿದಿರುವ ಮೇಲ್ಭಾಗದಲ್ಲಿ 25 ಕ್ಕೂ ಹೆಚ್ಚು ಮನೆಗಳಿದ್ದು, ಹತ್ತು ಮನೆಗಳು ಸಂಪೂರ್ಣ ಅಪಾಯದಲ್ಲಿವೆ. ಮಳೆ ಸುರಿಯಲಾರಂಭಿಸಿದ್ದು, ಜಾಸ್ತಿಯಾದಲ್ಲಿ ಯಾವ ಸಂದರ್ಭದಲ್ಲಿಯಾದರೂ ಮನೆಗಳು ಕುಸಿದು ಬೀಳಲಿವೆ. ಸದ್ಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕುಸಿದಿರುವ ಸ್ಥಳಕ್ಕೆ ಪ್ಲಾಸ್ಟಿಕ್ ಹೊದಿಸಿದ್ದಾರೆ. ಆದರೂ ಮಣ್ಣು ಮಾತ್ರ ಅದರೊಳಗೆ ಕುಸಿಯುತ್ತಲೇ ಇದೆ. ಹೀಗಾಗಿ ಜನರು ಜೀವ ಕೈಯಲ್ಲಿ ಬಿಗಿ ಹಿಡಿದು ಕಾಲ ದೂಡುತ್ತಿದ್ದಾರೆ.

ಕಷ್ಟಪಟ್ಟು ಮಾಡಿದ ಮನೆ ಹೀಗಾಯಿತಲ್ಲಾ ಎನ್ನೋ ಆತಂಕದಲ್ಲಿ ಯೋಚಿಸಿ ಹಂಸ ಎಂಬವರ 65 ವರ್ಷದ ವೃದ್ಧ ಪತ್ನಿ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದಾರೆ. ಇತ್ತ ಮನೆಯೂ ಬೀಳುವ ಆತಂಕದಲ್ಲಿದ್ದು, ಅತ್ತ ಪತ್ನಿಯೂ ಆಸ್ಪತ್ರೆ ಸೇರಿರುವ ನೋವಿನಲ್ಲೇ ಕಾಲ ದೂಡುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದ್ದು ಭಾರೀ ಪ್ರಮಾಣದಲ್ಲಿ ಮಳೆ ಸುರಿದಲ್ಲಿ 10 ಮನೆಗಳು ನೆಲಸಮವಾಗುವ ಭಯದಲ್ಲೇ ಜನರು ಬದುಕುತ್ತಿದ್ದಾರೆ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಿ ಮುಂದೆ ಆಗುವ ಅಪಾಯ ತಪ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *