ಕೊರೊನಾ ಮಹಾಮಾರಿಯಿಂದ ಉತ್ಪನ್ನಗಳ ಮಾರಾಟವಿಲ್ಲದೆ ಅತಂತ್ರವಾಯ್ತು ನೆರೆ ಸಂತ್ರಸ್ತರ ಬದುಕು

ಮಡಿಕೇರಿ: 2018ರಲ್ಲಿ ಪ್ರಕೃತಿಯ ಭೀಕರ ಹೊಡೆತದಿಂದ ನಲುಗಿ ಹೋಗಿದ್ದ ನೂರಾರು ಕುಟುಂಬಗಳು ಅದೆಲ್ಲವನ್ನೂ ಮೆಟ್ಟಿನಿಂತು ಸ್ವಂತ ಉದ್ಯೋಗ ಆರಂಭಿಸಿದ್ದವು. ಕೊಡಗಿನ ಮಸಾಲ ಪದಾರ್ಥಗಳು, ಚಾಕೋಲೇಟ್‍ಗಳನ್ನು ಉತ್ಪಾದಿಸಿ ಆಸರೆ ಮಳಿಗೆಯಲ್ಲಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದವು. ಆದರೆ ಕೊರೊನಾ ಮಹಾಮಾರಿ ಆಸರೆಯನ್ನೇ ಮುರಿದು ಬೀಳಿಸುತ್ತಿದೆ.

ಜಿಲ್ಲೆಯ ಮಡಿಕೇರಿ ತಾಲೂಕಿನ ಕಾಲೂರಿನಲ್ಲಿ 2018ರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ, ಮನೆ ಮಠಗಳನ್ನು ಕಳೆದುಕೊಂಡರೂ ತಮ್ಮ ಊರಿನಲ್ಲಿ ಸ್ವಂತ ಉದ್ಯೋಗ ಆರಂಭಿಸಿದ್ದರು. ಉತ್ಪಾದನೆಯಾದ ಚಾಕೊಲೇಟ್, ಮಸಾಲೆ ಪದಾರ್ಥಗಳನ್ನು ಮಾರಲು, ಮಡಿಕೇರಿಯ ಪ್ರವಾಸಿತಾಣ ರಾಜಾಸೀಟ್ ಬಳಿ ಆಸರೆ ಮಳಿಗೆಯನ್ನು ತೆರೆದಿದ್ದರು. ಸಾಕಷ್ಟು ಮಸಾಲೆ ಪದಾರ್ಥ, ಚಾಕೋಲೇಟ್ ಜೊತೆಗೆ ಇನ್ನಿತರ ಸ್ಪೈಸಸ್ ವಸ್ತುಗಳನ್ನು ಆಸರೆ ಮಳಿಗೆಯಲ್ಲಿ ಮಾರಾಟ ಮಾಡಿ, ನೆಮ್ಮದಿಯ ಆಸರೆ ಪಡೆದಿದ್ದರು.

ಕೊರೊನಾ ಮಹಾಮಾರಿ ಅಬ್ಬರಿಸಿದ ಪರಿಣಾಮ ಪ್ರವಾಸೋದ್ಯಮ ಸೇರಿದಂತೆ ಕೊಡಗಿನ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಹೀಗಾಗಿ ಭೂಕುಸಿತದಲ್ಲಿ ನಲುಗಿದ್ದ ಸಂತ್ರಸ್ತರು ಆಸರೆಯ ಯಾವುದೇ ಉತ್ಪನ್ನಗಳ ಮಾರಾಟವಿಲ್ಲದೆ ಬದುಕು ಮತ್ತೆ ಅತಂತ್ರವಾಗಿದೆ. ಆಸರೆ ಅಂಗಡಿಯ ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಜೊತೆಗೆ ಸಾಕಷ್ಟು ಮಹಿಳೆಯರು ಟೈಲರಿಂಗ್ ಮಾಡುವ ಮೂಲಕ ಬದುಕು ಕಂಡುಕೊಂಡಿದ್ದರು. ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ಹೊಲಿದು, ಉತ್ತಮ ಆದಾಯ ಗಳಿಸುತ್ತಿದ್ದರು. ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊಲಿದಿದ್ದಾರೆ. ಆದರೆ ಕೊರೊನಾ ಮಿತಿಮೀರುತ್ತಿರುವುದರಿಂದ ಶಾಲೆಗಳು ಆರಂಭವಾಗದೆ, ಲಕ್ಷಾಂತರ ಬಂಡವಾಳ ಹಾಕಿ ಹೊಲಿದಿರುವ ಸಮವಸ್ತ್ರಗಳು ಹಾಗೇ ಉಳಿದಿವೆ.

ಕೊರೊನಾದಿಂದ ಸಂತ್ರಸ್ತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮಸಾಲೆ ಉತ್ಪಾದನಾ ಘಟಕ ಮತ್ತು ಟೈಲರಿಂಗ್ ಘಟಕಗಳಲ್ಲಿ 60 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಆದಾಯವಿಲ್ಲದೆ ಸಿಬ್ಬಂದಿಗೂ ಸಂಬಳವೂ ಇಲ್ಲದೆ ಬದುಕು ಅತಂತ್ರವಾಗಿದೆ.

Comments

Leave a Reply

Your email address will not be published. Required fields are marked *