ಬೆಂಗಳೂರಿನಿಂದ ಯಾದಗಿರಿಗೆ ಕೊರೊನಾ ಕಂಟಕ- ಗ್ರಾಮಸ್ಥರಲ್ಲಿ ಆತಂಕ

ಯಾದಗಿರಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ನರ್ತನಕ್ಕೆ ಜನರು ಸಂಪೂರ್ಣ ನಲುಗಿ ಹೋಗಿದ್ದಾರೆ. ಆದರೆ ಇತ್ತ ಯಾದಗಿರಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಹೊತ್ತಲ್ಲಿ ಈಗ ಯಾದಗಿರಿಗೆ ಮತ್ತೊಂದು ಮಹಾ ಕಂಟಕ ಎದುರಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ದಿನೇ ದಿನೇ ಮಿತಿ ಮೀರುತ್ತಿದೆ. ಇದರಿಂದ ಭೀತಿಗೊಳಗಾಗಿರುವ ಜನರು ನಮಗೆ ಜೀವನ ಮುಖ್ಯ, ಜೀವ ಇದ್ದರೆ ಕೂಲಿ ಮಾಡಿ ಆದ್ರೂ ಬದುಕಬಹುದು ಎಂದು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಬೆಂಗಳೂರಿನಿಂದ ದಿನದಿಂದ ದಿನಕ್ಕೆ ಸಾವಿರಾರು ಜನರು ವಿವಿಧ ಜಿಲ್ಲೆಗಳಿಗೆ ವಾಪಸ್ ತೆರಳುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಬಂದವರು ರಾತ್ರೋರಾತ್ರಿ ಗಂಟು, ಮೂಟೆ ಕಟ್ಟಿಕೊಂಡು ಊರ ದಾರಿ ಹಿಡಿದಿದ್ದಾರೆ. ಇದರ ಪರಿಣಾಮ ಜಿಲ್ಲೆಯಲ್ಲಿ ಮತ್ತಷ್ಟು ಕೊರೊನಾ ಆತಂಕ ಸೃಷ್ಟಿಯಾಗಿದೆ.

ಭಾರೀ ಪ್ರಮಾಣದಲ್ಲಿ ಯಾದಗಿರಿ ಬಸ್‍ಗಳತ್ತ ಜನರು ಮುಖ ಮಾಡಿದ್ದರಿಂದ, ಬೆಂಗಳೂರಿನ ಯಾದಗಿರಿ ಡಿಪೋದಿಂದ ಹೆಚ್ಚು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಬಸ್ಸುಗಳಲ್ಲಿ ಜನ ಅಂತರ ಪಾಲಿಸಲು, ಮಾಸ್ಕ್ ಧರಿಸಲು ಜನರು ತೋರಿಸುತ್ತಿರುವ ಅಸಡ್ಡೆ ನಿರ್ವಾಹಕ ಮತ್ತು ಚಾಲಕರಲ್ಲಿ ಆತಂಕ ಸೃಷ್ಟಿಸಿದೆ.

ಬೆಂಗಳೂರಿನಿಂದ ಬಂದವರು ಸಾಂಸ್ಥಿಕ ಕ್ವಾರಂಟೈನ್ ಇಲ್ಲದೇ ನೇರವಾಗಿ ಗ್ರಾಮಗಳಿಗೆ ಹೋಗ್ತಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಜನರಿಗೆ ಧೈರ್ಯ ತುಂಬಿರುವ ಜಿಲ್ಲಾಧಿಕಾರಿಗಳು, ಬೆಂಗಳೂರಿನಿಂದ ಬಂದವರ ಎಲ್ಲರ ಮೇಲೂ ನಿಗಾ ಇಡಲಾಗಿದ್ದು, ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸಾವಿರ ದಾಟಿದ್ದು, ಬೆಂಗಳೂರಿನಿಂದ ಬಂದವರಿಂದ ಮತ್ತಷ್ಟು ಆತಂಕ ಹೆಚ್ಚಾಗುವ ಭೀತಿ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *