ವಿದ್ಯುತ್ ಬೇಡಿಕೆ ಇಳಿಮುಖ- RTPS ನ ಎಂಟೂ ಘಟಕಗಳ ಕಾರ್ಯ ಸ್ಥಗಿತ

ರಾಯಚೂರು: ವಿದ್ಯುತ್ ಬೇಡಿಕೆ ಕಡಿಮೆಯಾದ ಹಿನ್ನೆಲೆ ನಗರದ ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‍ ಟಿಪಿಎಸ್‍ನ ಎಲ್ಲ ಎಂಟು ವಿದ್ಯುತ್ ಘಟಕಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಳಿಮುಖವಾದ ಹಿನ್ನೆಲೆ ಸ್ಥಗಿತ ಕ್ರಮ ಕೈಗೊಳ್ಳಲಾಗಿದೆ. ಎಂಟು ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ನಿಲ್ಲಿಸಿ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಕೊರೊನಾ ಹಿನ್ನೆಲೆ ಕೈಗಾರಿಕೆಗಳು ಬಂದ್ ಆಗಿರುವ ಹಿನ್ನೆಲೆ ಕಳೆದ ಮೂರು ತಿಂಗಳಿಂದ ವಿದ್ಯುತ್ ಬೇಡಿಕೆಯಲ್ಲಿ ಕುಸಿತವಾಗಿದೆ. ಈ ಬಾರಿ ಬೇಸಿಗೆಯಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಾಗದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ತಿಂಗಳು ಎರಡು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಈ ಎರಡು ಘಟಕಗಳನ್ನು ಸಹ ಬಂದ್ ಮಾಡಲಾಗಿದೆ.

ಪವನ, ಜಲ ವಿದ್ಯುತ್ ಸ್ಥಾವರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 9009 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ರಾಜ್ಯದ ಬೇಡಿಕೆ 8992 ಮೆಗಾವ್ಯಾಟ್ ಇದೆ. ವೈಟಿಪಿಎಸ್‍ನ ಎರಡು ಘಟಕಗಳಲ್ಲಿ ಎರಡನೇ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಬಳ್ಳಾರಿಯ ಬಿಟಿಪಿಎಸ್‍ನ ಮೂರು ಘಟಕಗಳ ಕಾರ್ಯವನ್ನು ಸಹ ಸ್ಥಗಿತಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *