ನೆಲಕ್ಕೆ ಬಿದ್ದ ವಿದ್ಯುತ್ ಕಂಬ, ವೈರ್ ಜೊತೆಗೆ ಬಾಲಕಿ ಆಟ

– ಹೈ ವೋಲ್ಟೇಜ್ ವಿದ್ಯುತ್ ತಂತಿಯೇ ಇವಳ ಜೋಕಾಲಿ

ಯಾದಗಿರಿ: ಕೊರೊನಾದಿಂದ ಶಾಲೆಗೆ ರಜೆ ಇರುವ ಹಿನ್ನೆಲೆ ಪೋಷಕರು ತಮ್ಮ ಮಕ್ಕಳನ್ನು ಬೇಕಾ ಬಿಟ್ಟಿಯಾಗಿ ಆಟವಾಡಲು ಬಿಟ್ಟಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಇಲ್ಲೊಬ್ಬ ಬಾಲಕಿ ಮಳೆ ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ತಂತಿಯ ಜೊತೆ ಆಟವಾಡಿದ್ದು, ಹೈ ವೋಲ್ಟೇಜ್ ವಿದ್ಯುತ್ ತಂತಿಯನ್ನೇ ಬಾಲಕಿ ಜೋಕಾಲಿ ಮಾಡಿಕೊಂಡಿದ್ದಾಳೆ.

ಜಿಲ್ಲೆಯ ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಬಾಲಕಿ ಕೆಲ ಹೊತ್ತು ಅಲ್ಲಿಯೇ ಆಟವಾಡಿದ್ದಾಳೆ. ಅದೃಷ್ಟವಶಾತ್ ವಿದ್ಯುತ್ ತಂತಿಯಲ್ಲಿ ಕರೆಂಟ್ ಇರದ ಕಾರಣ ಬಾಲಕಿ ಅನಾಹುತದಿಂದ ಪಾರಾಗಿದ್ದಾಳೆ. ಒಂದು ಸಣ್ಣ ನಿಷ್ಕಾಳಜಿ ಮಕ್ಕಳ ಪ್ರಾಣಕ್ಕೆ ಕುತ್ತು ತರಬಹುದು. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆ, ಗಾಳಿಗೆ ವಿದ್ಯತ್ ಕಂಬಗಳು ಧರೆಗುರುಳಿದ್ದವು. ಬಿದ್ದು ಎರಡು ದಿನವಾಗಿದ್ದರೂ ಜೆಸ್ಕಾಂ ಸಿಬ್ಬಂದಿ ಮಾತ್ರ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸ್ಥಳೀಯರು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಡೋಂಟ್‍ಕೇರ್ ನೀತಿ ಅನುಸರಿಸುತ್ತಿದ್ದಾರೆ. ಮಕ್ಕಳು ಪಾಲಕರ ಕಣ್ಣು ತಪ್ಪಿಸಿ ಗ್ರಾಮದ ಹೊರ ವಲಯಕ್ಕೆ ಬಂದು ಕಂಬದಲ್ಲಿ ಆಟವಾಡುತ್ತಿದ್ದಾರೆ.

ಮಕ್ಕಳು ಆಟವಾಡುತ್ತಿರುವುದನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದು, ವಿಷಯ ತಿಳಿಸಿದ ಗ್ರಾಮಸ್ಥರಿಗೆ ಕಂಬದಲ್ಲಿ ವಿದ್ಯುತ್ ಹರಿಯುವದಿಲ್ಲ ಎಂಬ ಬೇಜವಾಬ್ದಾರಿ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *