33 ಗಂಟೆಯ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿ ಅಂತ್ಯ- ರಸ್ತೆಗಳು ಖಾಲಿ, ಹೊರಬಂದವ್ರಿಗೆ ಲಾಠಿ

ಬೆಂಗಳೂರು: ರಾಜ್ಯದಲ್ಲಿ ಮೊದಲ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿ ಅಂತ್ಯವಾಗಿದೆ. ಇನ್ನೂ ಕೆಲವರು ರೂಲ್ಸ್ ಮೀರಿ ರಸ್ತೆಗೆ ಇಳಿದು ಲಾಠಿರುಚಿ ತಿಂದು ಮನೆಗೆ ಹೋಗಿದ್ದಾರೆ.

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸುನಾಮಿ ಸ್ಫೋಟಕ್ಕೆ ಬ್ರೇಕ್ ಹಾಕಲು ಸಂಡೇ ಲಾಕ್‍ಡೌನ್ ಅಸ್ತ್ರಕ್ಕೆ ಜನರಿಂದ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಹಂತದಲ್ಲಿ ಮಹಾಮಾರಿ ಕೊರೊನಾ ಕಂಟ್ರೋಲ್‍ಗೆ ಸರ್ಕಾರ ಆದೇಶಿಸಿದ್ದ ಫಸ್ಟ್ ಸಂಡೇ ಲಾಕ್‍ಡೌನ್ ಬೆಳಗ್ಗೆ 5 ಗಂಟೆಗೆ ಯಶಸ್ವಿಯಾಗಿ ಅಂತ್ಯವಾಗಿದೆ. ಈ ಹಿಂದಿನ ಲಾಕ್‍ಡೌನ್‍ಗಳಿಗೆ ಹೋಲಿಸಿದ್ರೆ 33 ಗಂಟೆಗಳ ಸಂಡೇ ಲಾಕ್‍ಡೌನ್‍ಗೆ ಜನ ಸಹಕರಿಸಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಿತ್ತು. ಜನರ ಓಡಾಟ ಭಾರೀ ವಿರಳವಾಗಿತ್ತು. ಮನೆಯಲ್ಲೇ ಇದ್ದ ಬೆಂಗಳೂರಿಗರು ಸಂಡೇ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ರು.

ಸಂಡೇ ಲಾಕ್‍ಡೌನ್ ಹಿನ್ನೆಲೆ ವಾಹನಗಳು ಓಡಾಡಬಾರದು ಅಂತ ನಗರದ ಪ್ರಮುಖ ರಸ್ತೆಗಳನ್ನೆಲ್ಲಾ ಸಂಪೂರ್ಣವಾಗಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಮೆಜೆಸ್ಟಿಕ್, ಬಿಎಂಟಿಸಿ-ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ವು. ಕುಂಟು ನೆಪ ಹೇಳಿಕೊಂಡು ಅಲ್ಲಲ್ಲಿ ಓಡಾಡ್ತಿದ್ದ ವಾಹನ ಸವಾರರನ್ನ ಹಿಡಿದು ಪೊಲೀಸ್ರು ತಪಾಸಣೆ ಮಾಡಿ ಬಿಡ್ತಿದ್ರು.

ಸಂಡೇ ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕೆ ರಾಯಚೂರಲ್ಲಿ ಭರ್ಜರಿ ದಂಡ ಹಾಕಲಾಗಿದೆ. 484 ವಾಹನಗಳ ಜಪ್ತಿ ಮಾಡಲಾಗಿದೆ. ಅಲ್ಲದೇ ಒಂದೇ ದಿನ 78,700 ರೂಪಾಯಿ ದಂಡ ವಿಧಿಸಲಾಗಿದೆ. ಇದರ ನಡುವೆ ತಮಿಳುನಾಡಿನಿಂದ ಬಂದ ಪ್ರತಿಯೊಂದು ವಾಹನವನ್ನು ತಡೆದ ಪೊಲೀಸರು ವಾಪಸ್ ಕಳಿಸಿದ್ರು. ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ, ಧಾರವಾಡ, ಬಳ್ಳಾರಿಗಳಲ್ಲೂ ಕೂಡ ಜನ ಲಾಕ್‍ಡೌನ್ ಪಾಲಿಸಿದ್ದಾರೆ. ಆದರೆ ಮತ್ತೆ ಕೆಲವು ಕಡೆ ಜನ ಬೇಕಾಬಿಟ್ಟಿಯಾಗಿ ಅಡ್ಡಾಡಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಬಿಸಿಬಿಸಿ ಕಜ್ಜಾಯ ತಿಂದಿದ್ದಾರೆ. ಸಂಡೇ ಲಾಕ್‍ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದ ಜನರಿಗೆ ವಿಜಯಪುರ, ಗದಗದಲ್ಲಿ ಪೊಲೀಸರು ಲಾಠಿ ಬೀಸಿ ತೋರಿಸಿದ್ರು. ದಾವಣಗೆರೆಯಲ್ಲಿ ವ್ಯಾಪಾರ ಜೋರಾಗಿತ್ತು.

ಜನಪ್ರತಿನಿಧಿಗಳಿಂದಲೇ ರೂಲ್ಸ್ ಬ್ರೇಕ್:
ಜನಪ್ರತಿನಿಧಿಗಳು ಮೂರ್ಖರಂತೆ ವರ್ತಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಕುಮಾರಸ್ವಾಮಿ ಅವರು ಮೂಡಿಗೆರೆ ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅತ್ತ, ದಾವಣಗೆರೆಯ ಬಿಜೆಪಿಯವರೇ ಆದ ಮೇಯರ್ ಅಜಯ್ ಕುಮಾರ್, ಮೇಯರ್ ಕಚೇರಿಯಲ್ಲೇ ತಮ್ಮ ಬರ್ತ್‍ಡೇ ಸೆಲೆಬ್ರೇಶನ್ ಮಾಡಿದ್ದಾರೆ. ಈಗ ಇದೆಲ್ಲಾ ಬೇಕಿತ್ತಾ ಅಂತ ಮಾಧ್ಯಮಗಳು ಕೇಳಿದ್ದಕ್ಕೆ ವಿಡಿಯೋ ಮಾಡ್ಕೋತೀರಾ.. ಮಾಡ್ಕೋಳಿ. ನಾನ್ಯಾವುದಕ್ಕೂ ಹೆದರಲ್ಲ ಅಂದಿದ್ದಾರೆ.

ಒಟ್ಟಾರೆಯಾಗಿ ಕೊರೊನಾ ತಡೆಗೆ ಮೊದಲ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿದೆ. ಹೀಗೆ ಜನರು ಇನ್ನೆರಡು ವಾರ ನಡೆದುಕೊಂಡರೆ ಕೊರೊನಾ ಹರಡೋದನ್ನು ಖಂಡಿತವಾಗಿಯೂ ಸ್ವಲ್ಪಮಟ್ಟಿಗಾದರೂ ತಡೆಯಬಹುದು.

Comments

Leave a Reply

Your email address will not be published. Required fields are marked *