ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

-ಆಸ್ಪತ್ರೆ ಬಿಟ್ಟು ಹಳ್ಳಿಗಳಿಗೆ ತೆರಳಿ ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ವೈದ್ಯರ ಸೇವೆ ಮಹತ್ವ ಎಷ್ಟೆಂಬುದು ಎಲ್ಲರಿಗೂ ಅರಿವಾಗಿದೆ. ಆದ್ರೂ ಇಂತಹ ಸಂದರ್ಭದಲ್ಲೂ ಕೆಲ ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆ ಲಾಕ್ ಮಾಡಿದ್ದು ಉಂಟು. ಆದ್ರೆ ಇಲ್ಲೊಬ್ಬ ಖಾಸಗಿ ಆಸ್ಪತ್ರೆ ವೈದ್ಯರು ಮಾತ್ರ ತಮ್ಮ ಆಸ್ಪತ್ರೆ ಮುಚ್ಚಿ ನೇರವಾಗಿ ಜನರ ಬಳಿಯೇ ಹಳ್ಳಿಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ಕೊಡ್ತಿದ್ದಾರೆ. ರಾಷ್ಟ್ರೀಯ ವೈದ್ಯರ ದಿನದಿಂದ ಸಮಾಜಮುಖಿ ಮಾದರಿ ವೈದ್ಯರ ಕಾರ್ಯ ನೆನೆಯುವ ವರದಿ ಇದಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಪೀಪಲ್ಸ್ ಖಾಸಗಿ ಆಸ್ಪತ್ರೆಯ ವೈದ್ಯ ಅನಿಲ್ ಕುಮಾರ್ ಕೋವಿಡ್-19 ಸಂಕಷ್ಟದ ಸಮಯದಲ್ಲಿ ತಮ್ಮ ತಾಲೂಕಿನ ಬಡ ಜನರ ಆರೋಗ್ಯ ಕಾಯೋಕೆ ಮುಂದಾಗಿದ್ದಾರೆ. ಕೊರೊನಾ ಆರಂಭದಿಂದ ಹಾಗೂ ಲಾಕ್‍ಡೌನ್ ಆದ ನಂತರ ಖುದ್ದು ತಾವೇ ಪ್ರತಿದಿನ 2-3 ಹಳ್ಳಿಗಳಂತೆ ಹಳ್ಳಿ ಹಳ್ಳಿಗೂ ಹೋಗಿ ಜನರ ಆರೋಗ್ಯ ತಪಾಸಣೆ ಮಾಡುತ್ತಾ ಬರುತ್ತಿದ್ದಾರೆ.

ಕೇವಲ ಆರೋೀಗ್ಯ ತಪಾಸಣೆ ಅಷ್ಟೇ ಅಲ್ಲದೆ ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಲಹೆ ಸೇವೆ ಮಾಡುತ್ತಾ ಉಚಿತವಾಗಿ ಔಷಧಿಗಳನ್ನ ಕೊಡುತ್ತಿದ್ದಾರೆ. ಲಾಕ್‍ಡೌನ್ ಇರುವವರೆಗೂ ಹಳ್ಳಿ ಹಳ್ಳಿಗಳಿಗೂ ತೆರಳಿ ಸೇವೆ ನೀಡಿದ್ದ ವೈದ್ಯ ಅನಿಲ್ ಕುಮಾರ್, ಈಗ ಜನ ನರೇಗಾ ಮೂಲಕ ಕೆಲಸ ಮಾಡುವ ಆಯಕಟ್ಟಿನ ಸ್ಥಳಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಬಡ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಕೋವಿಡ್ 19 ವಿರುದ್ಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇಷ್ಟು ದಿನ ಬಾಗೇಪಲ್ಲಿ ತಾಲೂಕಿನಲ್ಲಿ ಮಾಡುತ್ತಿದ್ದ ಸೇವೆಯನ್ನ ಈಗ ಪಕ್ಕದ ಗುಡಿಬಂಡೆ ಗೌರಿಬಿದನೂರು ತಾಲೂಕಿಗೆ ವಿಸ್ತರಿಸುತ್ತಿದ್ದು, ವೈದ್ಯರ ಈ ಸೇವೆಯನ್ನ ಜನ ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಬಾಗೇಪಲ್ಲಿಯ ಪೀಪಲ್ಸ್ ಆಸ್ಪತ್ರೆ ಅಂದ್ರೆ ಜನಸಾಮಾನ್ಯರ ವೈದ್ಯ ಅಂತಲೇ ಪ್ರಖ್ಯಾತ ಪಡೆದಿರುವ ವೈದ್ಯ ಅನಿಲ್ ಕುಮಾರ್ ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಸೇವೆಯನ್ನ ಕರ್ತವ್ಯ ಅಂತ ಭಾವಿಸಿ ಬಡ ಜನರ ಸೇವೆ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯವೇ ಸರಿ. ರಾಷ್ಟ್ರೀಯ ವೈದ್ಯರ ದಿನದಂದು ಈ ವೈದ್ಯರಿಗೆ ನಮ್ಮದೊಂದು ಸಲಾಂ.

Comments

Leave a Reply

Your email address will not be published. Required fields are marked *