EXCLUSIVE: ನಿನ್ನೆ ಬಳ್ಳಾರಿ, ಇಂದು ದಾವಣಗೆರೆ ಸರದಿ- ಕಸ ಬಿಸಾಡುವಂತೆ ಗುಂಡಿಗೆ ಶವ ಬಿಸಾಕಿದ ಜೆಸಿಬಿ!

– ಮುಗಿಲು ಮುಟ್ಟಿತ್ತು ಮಗ, ಸಂಬಂಧಿಕರ ಆಕ್ರಂದನ

ದಾವಣಗೆರೆ: ಸತ್ತ ಮೇಲೆ ನೂರಾರು ಜನ ಮೆರವಣಿಗೆ ಮಾಡಿ ಕಳುಹಿಸಿಕೊಡಬೇಕು ಎಂದು ಪ್ರತಿಯೊಬ್ಬರದ್ದು ಕೊನೆ ಆಸೆಯಾಗಿರುತ್ತೆ. ಆದರೆ ಈ ಕೋವಿಡ್ ಬಂದು ಸಾವನ್ನಪ್ಪಿದರೆ ಮಾತ್ರ ಯಾರೂ ಕೂಡ ಊಹಿಸಲಾಗದಷ್ಟೆ ಮಟ್ಟಿಗೆ ನಮ್ಮ ಶವಸಂಸ್ಕಾರ ಇರುತ್ತೆ. ಇದಕ್ಕೆ ಸತ್ಯವಾದ ನಿದರ್ಶನದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ದಾವಣಗೆರೆಯ ಚನ್ನಗಿರಿ ತಾಲೂಕಿನ 56 ವರ್ಷದ ಮಹಿಳೆಯೊಬ್ಬರು ಕಳೆದ 17 ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದು ಕೂಡ ಅಂದೇ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಚನ್ನಗಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮಾಡಲಾಗಿತ್ತು.

ಆದರೆ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಸರಿಸಿದ ಕ್ರಮವನ್ನು ನೋಡಿದ್ರೆ ಯಾರು ಕೂಡ ಕೋವಿಡ್ ನಿಂದ ಸಾಯಬಾರದು ಎನ್ನುವಂತಹ ಭಯ ಹುಟ್ಟುತ್ತದೆ. ಯಾಕೆಂದರೆ ಜೆಸಿಬಿ ಮೂಲಕ ಮೃತದೇಹವನ್ನು ಎತ್ತಿಕೊಂಡು ಹೋಗಿ ಕಸವನ್ನು ಬಿಸಾಕುವಂತೆ ಬಿಸಾಕಿ ಮಣ್ಣುಮುಚ್ಚಲಾಗಿದೆ. ಈ ಹೀನಾಯ ದೃಶ್ಯ ನೋಡಿದರೆ ಎಂಥವರ ಎದೆಯಲ್ಲಿ ಭಯ ಶುರುವಾಗುವುದು ಕಾಮನ್. ಅಲ್ಲದೆ ಈ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೃತದೇಹವನ್ನು ದಫನ ಮಾಡುವಾಗ ಸಿಪಿಐ ಆರ್ ಆರ್ ಪಾಟೀಲ್, ಹಾಗೂ ತಹಶೀಲ್ದಾರ್ ಪುಟ್ಟರಾಜು ಗೌಡ ಸೇರಿದಂತೆ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಕೂಡ ಇದ್ದರು. ಅವರ ಎದುರೇ ಈ ರೀತಿಯಾದ ಹೀನಾಯವಾಗಿ ಮೃತದೇಹವನ್ನು ದಫನ ಮಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಬಳ್ಳಾರಿಯಲ್ಲಿ ಅಮಾನವೀಯವಾಗಿ ಶವ ಸಂಸ್ಕಾರ ಮಾಡಿದವರು ಅಮಾನತು

ಈ ಸಂಬಂಧ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಇದುವರೆಗೂ ಸಾವನ್ನಪ್ಪಿದ ಸೋಂಕಿತರು ಅಂತ್ಯಕ್ರಿಯೆಯನ್ನು ಸರ್ಕಾರದ ಅದೇಶದಂತೆ, ಕೋವಿಡ್ ನಿಯಮಾವಳಿ ಗಳ ಪ್ರಕಾರವೇ ಮಾಡಲಾಗಿದೆ. ಏನಾದರೂ ಲೋಪದೋಷ ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಏನೇ ಆಗಲಿ ಈ ರೀತಿ ಕೋವಿಡ್ ಸೋಂಕು ಬಂದು ಸಾವನ್ನಪ್ಪಿದವರನ್ನು ಹೀಗೆ ಕಸದ ರೀತಿ ಹಾಕಿ ಅಂತ್ಯಕ್ರಿಯೆ ಮಾಡುವುದು ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವ ಕೆಲಸವಾಗಿದೆ.

Comments

Leave a Reply

Your email address will not be published. Required fields are marked *