3 ರೂ. 46 ಪೈಸೆ ಸಾಲ ಕಟ್ಟಲು 15 ಕಿ.ಮೀ ನಡೆದ ರೈತ

ಶಿವಮೊಗ್ಗ: ಬ್ಯಾಂಕ್‍ಗಳಲ್ಲಿ ಲಕ್ಷ, ಕೋಟಿ ಲೆಕ್ಕದಲ್ಲಿ ಸಾಲ ಪಡೆದವರು ಪಡೆದ ಸಾಲ ಹಿಂದಿರುಗಿಸದೇ ಆರಾಮಾಗಿ ಇದ್ದಾರೆ. ಅಂತಹವರಿಗೆ ಯಾವ ಸರ್ಕಾರಗಳು ಆಗಲಿ, ಬ್ಯಾಂಕ್ ಗಳಾಗಲಿ ಏನು ಮಾಡಲು ಹೋಗಿಲ್ಲ. ಆದರೆ ಇಲ್ಲೊಬ್ಬ ಸ್ವಾಭಿಮಾನಿ ರೈತನನ್ನು ಬ್ಯಾಂಕ್ ಅವಮಾನವೀಯವಾಗಿ ನಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಹೌದು, ಬ್ಯಾಂಕ್‍ಗೆ ಕೇವಲ 3 ರೂಪಾಯಿ 46 ಪೈಸೆ ಸಾಲ ಕಟ್ಟಲು ರೈತ 15 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ತೆರಳಿ ಸಾಲ ಮರುಪಾವತಿ ಮಾಡಿ ಬಂದಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮಡೆ ಗ್ರಾಮದಲ್ಲಿ ನಡೆದಿದೆ.

ಅಮಡೆ ಗ್ರಾಮದ ರೈತ ಲಕ್ಷ್ಮೀನಾರಾಯಣ ನಿಟ್ಟೂರಿನ ಬ್ಯಾಂಕಿವೊಂದರಲ್ಲಿ 35 ಸಾವಿರ ಬೆಳೆ ಸಾಲ ಪಡೆದಿದ್ದರು. ಇದರಲ್ಲಿ 32 ಸಾವಿರ ರೂ. ಸಾಲ ಮನ್ನಾ ಯೋಜನೆಯಡಿ ಮನ್ನಾ ಆಗಿತ್ತು. ಉಳಿದ 3 ಸಾವಿರ ರೂಗಳನ್ನು ಬಡ್ಡಿ ಸಮೇತ ವಾಪಸ್ ಮಾಡಿದ್ದರು. ಆದರೆ ಕಳೆದ ಗುರುವಾರ ಬ್ಯಾಂಕಿನಿಂದ ಲಕ್ಷ್ಮೀ ನಾರಾಯಣ್ ರವರಿಗೆ ಫೋನ್ ಮಾಡಿದ ಸಿಬ್ಬಂದಿ, ತಕ್ಷಣ ನೀವು ಬ್ಯಾಂಕಿಗೆ ಬಂದು ಹೋಗಿ ಎಂದು ತಿಳಿಸಿದ್ದಾರೆ. ಕೆಲಸದ ಕಾರಣ ಶುಕ್ರವಾರ ಬ್ಯಾಂಕಿಗೆ ಹೋಗಿದ್ದಾರೆ. ಅದು ಸುಮಾರು 15 ಕಿ.ಮೀ. ದೂರ ನಡೆದೇ ಹೋಗಿ ಬ್ಯಾಂಕಿನಲ್ಲಿ ವಿಚಾರಿಸಿದಾಗ ನಿಮ್ಮ ಸಾಲದ ಹಣದಲ್ಲಿ 3 ರೂ. 46 ಪೈಸೆ ಬಾಕಿ ಇದೆ ಅದನ್ನು ಕಟ್ಟಿ ಎಂದು ಹೇಳಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಮಾತು ಕೇಳುತ್ತಿದ್ದಂತೆ ಲಕ್ಷ್ಮಿನಾರಾಯಣ್ ರವರಿಗೆ ಕುಸಿದು ಹೋಗುವಂತೆ ಆಗಿದೆ. ಇದನ್ನು ಫೋನ್ ನಲ್ಲಿಯೇ ಹೇಳಿದ್ದರೆ ನಿಟ್ಟೂರಿನಲ್ಲಿನ ತನ್ನ ಸ್ನೇಹಿತರಿಂದ ಹಣ ಕಟ್ಟಿಸುತ್ತಿದ್ದೆ. ಹಿಂದೆ ಸಾಲದ ಬಡ್ಡಿ ಕಟ್ಟಲು ಬಂದಾಗ ಕೇಳಿದರೆ ಅಂದೇ ಕಟ್ಟುತ್ತಿದ್ದೆ. ಆದರೆ ಬ್ಯಾಂಕಿನವರು ಅರ್ಜೆಂಟ್ ಆಗಿ ಬಂದು ಹೋಗಿ ಎಂದು ಕರೆದು ಈಗ ಸಾಲ ಕಟ್ಟಿ ಎಂದಿದ್ದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *