ಮನೆ ಸ್ವಚ್ಛ ಮಾಡುವಾಗ ಭೂಕುಸಿತ- ಜಾನಪದ ನರ್ತಕಿ ದುರ್ಮರಣ

– ಲಂಡನ್‍ನಲ್ಲಿ ನೃತ್ಯ ಮಾಡಲು ಅವಕಾಶ ಸಿಕ್ಕಿತ್ತು

ದಿಸ್ಪುರ್: ಅಸ್ಸಾಂನ ಗುವಾಹಟಿಯ ಖಾರ್ಘುಲಿ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಯುವ ಜಾನಪದ ನರ್ತಕಿಯೊಬ್ಬರು ಮೃತಪಟ್ಟಿದ್ದಾರೆ.

ಪ್ರಿಯಾಂಕಾ ಬೋರೊ (21) ಮೃತ ಯುವತಿ. ಈಕೆ ಗುವಾಹಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಬೆಳಗ್ಗೆ ಸುಮಾರು 6 ಗಂಟೆಗೆ ಪ್ರಿಯಾಂಕಾ ಮನೆಕೆಲಸಗಳಲ್ಲಿ ನಿರತರಾಗಿದ್ದಳು. ಈ ವೇಳೆ ನಿರಂತರ ಸುರಿದ ಮಳೆಯಿಂದ ಭೂಕುಸಿತದ ಉಂಟಾಗಿದೆ. ಪರಿಣಾಮ ಮನೆ ಸ್ವಚ್ಛ ಮಾಡುತ್ತಿದ್ದ ಪ್ರಿಯಾಂಕಾ ಮಣ್ಣಿನೊಳಗೆ ಸಿಲುಕಿ ಮೃತಪಟ್ಟಿದ್ದಾರೆ.

ಪ್ರಿಯಾಂಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗೌಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಪ್ರಿಯಾಂಕಾ ಅಸ್ಸಾಂನಲ್ಲಿ ಪ್ರತಿಭಾವಂತ ನರ್ತಕಿ ಎಂದು ಪ್ರಸಿದ್ಧರಾಗಿದ್ದರು. ಅನೇಕ ವೇದಿಕೆಗಳಲ್ಲಿ ಪ್ರಿಯಾಂಕಾ ತನ್ನ ನೃತ್ಯ ಪ್ರದರ್ಶಗಳನ್ನು ನೀಡಿದ್ದರು.

21 ವರ್ಷದ ಪ್ರಿಯಾಂಕಾ 2015ರ ಎಚ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದರು. ಬಿಹು, ಶಾಸ್ತ್ರಿ ಮತ್ತು ಇತರ ಸಾಂಸ್ಕೃತಿಕ ನೃತ್ಯಗಳನ್ನು ಮಾಡುತ್ತಿದ್ದರು. ಅನೇಕ ದೇಶಗಳಲ್ಲಿ ಮತ್ತು ಭಾರತದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ನೃತ್ಯ ಪ್ರದರ್ಶನಗಳ ಮೂಲಕ ಅಸ್ಸಾಂಗೆ ಪ್ರಶಸ್ತಿಗಳನ್ನು ತಂದಿದ್ದರು.

ಇತ್ತೀಚೆಗೆ ಲಂಡನ್‍ನಲ್ಲಿ ಜಾನಪದ ನೃತ್ಯ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಅಷ್ಟರಲ್ಲಿ ಭೂಕುಸಿತದಿಂದ ಪ್ರಿಯಾಂಕಾ ಬೋರೊ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಿಯಾಂಕಾ ಸಾವಿನಿಂದ ಇಡೀ ಪ್ರದೇಶ ದುಃಖದ ಮಡುವಿನಲ್ಲಿದೆ. ಪ್ರಿಯಾಂಕಾ ಸಾವಿಗೆ ಸಾಂಸ್ಕೃತಿಕ ರಂಗದ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *