ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

ನವದೆಹಲಿ: ಪಾಕಿಸ್ತಾನಿಗಳು ಉಗ್ರರನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದ್ದು, ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲೇ ಅಮೆರಿಕ ಸೈನಿಕರು ಹತ್ಯೆ ಮಾಡಿದ ಅಲ್ ಖೈದಾ ಮುಖ್ಯಸ್ಥ, ಉಗ್ರ ಒಸಾಮಾ ಬಿನ್ ಲಾಡೆನ್‍ಗೆ ಹುತಾತ್ಮ ಪಟ್ಟವನ್ನು ನೀಡಿ ಗೌರವಿಸಿದ್ದಾರೆ.

ಇಮ್ರಾನ್ ಖಾನ್ ಪಾಕಿಸ್ತಾನದ ಪಾರ್ಲಿಮೆಂಟ್‍ನಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಎಷ್ಟು ಗೌರವ ಕೊಡುತ್ತದೆ ಎಂಬುದು ಬಯಲಾಗಿದೆ. ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಅಮೆರಿಕ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್‍ನನ್ನು ಹತ್ಯೆ ಮಾಡಿದರು. ಬಳಿಕ ವಿಶ್ವದ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ನಿಂದಿಸಲು ಪ್ರಾರಂಭಿಸಿದರು. ಈ ಮೂಲಕ ಮುಜುಗರಕ್ಕೀಡು ಮಾಡಿದರು ಎಂದು ದೂರಿದ್ದಾರೆ.

ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70 ಸಾವಿರ ಪಾಕಿಸ್ತಾನಿಗಳು ಸಾವನ್ನಪ್ಪಿದರು ಎಂದು ಖಾನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಸಾಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ರೂವಾರಿ, ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು 2011ರ ಮೇ 2 ರಂದು ಅಮೆರಿಕ ನೌಕಾಪಡೆ ಹತ್ಯೆ ಮಾಡಿದೆ. ಒಸಾಮಾ ತಂಗಿದ್ದ ಪಾಕಿಸ್ತಾನದ ಅಬೋಟಾಬಾದ್ ನಿವಾಸದ ಮೇಲೆ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ದಾಳಿ ನಡೆಸಿ ಹತ್ಯೆ ಮಾಡಿತ್ತು. ನಂತರ ಈ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಈತ ಉಗ್ರ ಎಂಬುದು ವಿಶ್ವಕ್ಕೆ ತಿಳಿದಿದ್ದರಿಂದ ಈತನ ಹತ್ಯೆಯಾದರೂ ಪಾಕಿಸ್ತಾನ ತುಟಿ ಬಿಚ್ಚಿರಲಿಲ್ಲ. ಇದೀಗ ಇಮ್ರಾನ್ ಖಾನ್ ಒಸಾಮಾ ಹುತಾತ್ಮ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *