ಎನ್ಆರ್‌ಬಿಸಿ ಆಧುನೀಕರಣದಲ್ಲಿ ಅಕ್ರಮದ ವಾಸನೆ: ರೊಚ್ಚಿಗೆದ್ದ ರೈತರು

– ಜಿಲ್ಲೆಯ ಜೀವನಾಡಿಯ ಕಾಮಗಾರಿ ಕಳಪೆ
– ನೂರಾರು ಕೋಟಿ ರೂ. ಲೂಟಿ ಮಾಡಿರುವ ಆರೋಪ

ರಾಯಚೂರು: ಜಿಲ್ಲೆಯ ಸಾವಿರಾರು ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಭರದಿಂದ ಸಾಗಿದೆ. ಆದರೆ ಕಾಲುವೆ ಕಾಮಗಾರಿ ಬಗ್ಗೆ ರೈತರಲ್ಲಿ ಆತಂಕ ಎದುರಾಗಿದೆ. ನೂರಾರು ಕೋಟಿ ರೂಪಾಯಿ ಖರ್ಚುಮಾಡಿ ಅಧುನೀಕರಣ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

ರಾಯಚೂರಿನ ದೇವದುರ್ಗ, ಲಿಂಗಸುಗೂರು ತಾಲೂಕುಗಳ ರೈತರ ಬದುಕಿನ ಚಿತ್ರಣವನ್ನೇ ಬದಲಿಸಿದ ನೀರಾವರಿಯ ಜೀವನಾಡಿಯಾದ ಕಾಲುವೆ ಇದಾಗಿದ್ದು, ಆಧುನೀಕರಣ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿದೆ. ಕಾಲುವೆಯ ಆರಂಭದಿಂದ 95 ಕಿ.ಮೀ. ವರೆಗೆ ಆಧುನೀಕರಣ ಕಾಮಗಾರಿ ನಡೆದಿದೆ. ಅಂದಾಜು 956 ಕೋಟಿ ವೆಚ್ಚದ ಕಾಮಗಾರಿಯನ್ನು ಡಿ.ವೈ.ಉಪ್ಪಾರ್ ಕಂಪನಿ ಗುತ್ತಿದೆ ಪಡೆದಿದೆ. ಕಾಮಗಾರಿ ಸ್ಥಳದಲ್ಲಿ ಎಂಜಿನಿಯರ್‍ಗಳು ಸಹ ಇಲ್ಲದೆ ಕಳಪೆ ಕೆಲಸ ನಡೆದಿದೆ ಎಂದು ರೈತರು ಆರೋಪಿಸಿದ್ದಾರೆ.

ಜುಲೈ ಅಂತ್ಯಕ್ಕೆ ಕಾಲುವೆಗೆ ನೀರು ಹರಿಸುವ ಯೋಚನೆಯಿದ್ದು, ತುರಾತುರಿಯಲ್ಲಿ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಮಾಡಲಾಗುತ್ತಿದೆ. ಕೃಷ್ಣ ಜಲಭಾಗ್ಯ ನಿಗಮದ ಯಾವುದೇ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಇರದೆ ಕಾಂಕ್ರೀಟ್ ಕೆಲಸ ಗುಣಮಟ್ಟದಲ್ಲಿ ನಡೆಯುತ್ತಿಲ್ಲ. ಈ ಹಿಂದೆಯೂ ಕಳಪೆ ಕಾಮಗಾರಿಯಿಂದ ಮುಖ್ಯಕಾಲುವೆ ಸಾಕಷ್ಟು ಬಾರಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಈಗ ಪುನಃ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ. ಹೀಗಾಗಿ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲುವೆ ನವೀಕರಣಕ್ಕಾಗಿ ಬಜೆಟ್‍ನಲ್ಲಿ 750 ಕೋಟಿ ರೂ. ಮೀಸಲಿಟ್ಟಿದ್ದರು. ಮೂರು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗ ವೆಚ್ಚ 956 ಕೋಟಿ ರೂ.ಗೆ ಏರಿದೆ. ಅಲ್ಲದೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆ ನೀಡಲಾಗಿದೆ. ಲಘು ಬೆಳೆಗಳಿಗೆ ಮಾತ್ರ ನೀರಾವರಿ ಮಾಡುವ ಉದ್ದೇಶದಿಂದ ಕಾಲುವೆ ಸಾಮಥ್ರ್ಯ ವಿನ್ಯಾಸ ಮಾಡಲಾಗಿದೆ. ಕಾಲುವೆಯಲ್ಲಿ 3,600 ಕ್ಯೂಸೆಕ್ ವೆರೆಗೆ ನೀರು ಹರಿಸಬಹುದು. ಆದರೆ ವಾಸ್ತವದಲ್ಲಿ 2,800 ಕ್ಯೂಸೆಕ್‍ನಷ್ಟು ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದೆ. ಅಧುನೀಕರಣ ವೇಳೆಯಾದರೂ ಇದನ್ನು ಸರಿಪಡಿಸಬಹುದಿತ್ತು. ಆದರೆ ಅವಸರವಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಹೋರಾಟ, ಒತ್ತಾಯದ ಫಲವಾಗಿಯೇ ಕಾಲುವೆ ಆಧುನೀಕರಣ ಕಾಮಗಾರಿ ಆರಂಭವಾಗಿದ್ದರೂ ರೈತರಲ್ಲಿ ಮಾತ್ರ ಆತಂಕ ಸೃಷಿಸಿದೆ. ಹೀಗಾಗಿ ಅಸಮಾಧಾನಗೊಂಡಿರುವ ರೈತರು ಗುತ್ತಿಗೆ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *