ಹಿರಿಯರ ಬಗ್ಗೆ ಕಾಳಜಿ ವಹಿಸಿ, ಮನೆಯಲ್ಲಿರುವಂತೆ ನೋಡ್ಕೊಳ್ಳಿ: ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಅಲ್ಲದೆ ಅವರನ್ನು ಆದಷ್ಟು ಮನೆಯಲ್ಲಿರುವಂತೆ ನೋಡಿಕೊಳ್ಳಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಹಿರಿಯ ನಾಗರಿಕರಿಗೆ ಕೊರೋನಾ ಸೋಂಕು ತಗುಲಿದರೆ ಅಪಾಯ ಹೆಚ್ಚು. ರಾಜ್ಯದ ಒಟ್ಟು ಸೋಂಕಿತರಲ್ಲಿ ಶೇ16.24ರಷ್ಟು ಜನ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಮರಣ ಪ್ರಮಾಣದಲ್ಲಿ ಶೇ 78.87ರಷ್ಟು ಜನ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಆದ್ದರಿಂದ ಮನೆಯಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಿ, ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ ಎಂದು ಬರೆದುಕೊಂಡು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಆರೋಗ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 37 ವರ್ಷದ ಮಹಿಳೆ ಸೇರಿ ರಾಜ್ಯದಲ್ಲಿ ಐವರು ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 142ಕ್ಕೇರಿದೆ. ಮೃತರಲ್ಲಿ ಮೂವರು ಬೆಂಗಳೂರಿನ ನಿವಾಸಿಗಳಾಗಿದ್ದು, ಇದರೊಂದಿಗೆ ನಗರದಲ್ಲಿ ಸಾವಿನ ಸಂಖ್ಯೆ 67ಕ್ಕೇರಿದೆ. ರಾಜ್ಯದ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 80 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರವೊಂದರಲ್ಲೇ 38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಸಾವಿನ ಸಂಖ್ಯೆ ಮಾತ್ರವಲ್ಲದೇ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಿದ್ದು, ನಿನ್ನೆ 126 ಹೊಸ ಕೋವಿಡ್ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 1,398ಕ್ಕೇರಿದೆ.

Comments

Leave a Reply

Your email address will not be published. Required fields are marked *