ಒಪ್ಪಂದ ರದ್ದು- ಚೀನಾ ಗಡಿಯಲ್ಲಿ ಆತ್ಮರಕ್ಷಣೆಗೆ ಗುಂಡು ಹಾರಿಸಲು ಸೈನಿಕರಿಗೆ ಅನುಮತಿ

ನವದೆಹಲಿ: ಆತ್ಮ ರಕ್ಷಣೆಗಾಗಿ ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್‌ ರಾವತ್‌ ಮತ್ತು ಮೂರು ಸೇನೆಯ ಮುಖ್ಯಸ್ಥರು ಆತ್ಮರಕ್ಷಣೆಗಾಗಿ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಅನುಮತಿ ನೀಡಿದ್ದಾರೆ.

ಕಳೆದ ಸೋಮವಾರ ರಾತ್ರಿ ಚೀನಿ ಸೈನಿಕರು ಮೊಳೆಗಳನ್ನು ವೆಲ್ಡ್‌ ಮಾಡಿದ ಬೇಸ್‌ ಬಾಲ್‌ ಬ್ಯಾಟ್‌ನಂತಿರುವ ಕಬ್ಬಿಣದ ರಾಡ್‌ಗಳಿಂದ ಭಾರತೀಯ ಸೇನೆಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಸೈನಿಕರಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ.

ಈ ಸಂಬಂಧ ನಿವೃತ್ತ ಮೇಜರ್ ಜನರಲ್ (ಡಾ.) ಜಿಡಿ ಬಕ್ಷಿ ಎಸ್ ಎಂ ಟ್ವೀಟ್‌ ಮಾಡಿ ಧನ್ಯವಾದ ಹೇಳಿದ್ದಾರೆ. ಓ ದೇವರೇ ಧನ್ಯವಾದ. ಸೇನಾ ಪಡೆಗಳ ಮುಖ್ಯಸ್ಥರಾದ ಸಿಡಿಎಸ್‌ ಮತ್ತು ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಆತ್ಮ ರಕ್ಷಣೆಯ ಸಮಯದಲ್ಲಿ ನಮ್ಮ ಯೋಧರು ಗುಂಡು ಹಾರಿಸಬಹುದು ಎಂದು ಅಧಿಕಾರ ನೀಡಿದ್ದಾರೆ. ಗಡಿಯಲ್ಲಿ ಗುಂಡು ಹಾರಿಸಕೂಡದು ಎಂಬ 1996ರ ಒಪ್ಪಂದವನ್ನು ಚೀನಾ ಸೇನೆಯು ಉಲ್ಲಂಘಿಸಿ ಚೂಪಾದ ಆಯುಧಗಳನ್ನು ಬಳಸಿದೆ. ನಾವು ಶಿಲಾಯುಗಕ್ಕೆ ಹೋಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ನಾವು ಹೆದರಲ್ಲ: ಭಾರತೀಯ ಸೇನೆಗೆ ಸರ್ಕಾರ ಪೂರ್ಣ ಸ್ವಾತಂತ್ರ್ಯ ನೀಡಿದ ಬೆನ್ನಲ್ಲೇ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಇದಕ್ಕೆ ನಾವು ಹೆದರುವುದಿಲ್ಲ ಎಂದು ತಿಳಿಸಿದೆ. ಸೇನೆಗೆ ಗುಂಡು ಹಾರಿಸಲು ಅಧಿಕಾರ ನೀಡಲಾಗಿದೆ. ಭಾರತ ಚೀನಾ ಜೊತೆ ಯುದ್ಧ ಮಾಡಲು ನಿರ್ಧರಿಸಿದ್ಯಾ? ಭಾರತ ಗುಂಡಿನ ದಾಳಿ ನಡೆಸಲು ಆರಂಭಿಸಿದರೆ ನಾವು ಗುಂಡಿನ ದಾಳಿ ನಡೆಸುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಟ್ವೀಟ್‌ ಮಾಡಿದೆ.

ಒಪ್ಪಂದ ಮಾಡಿಕೊಂಡಿದ್ದು ಯಾಕೆ?
ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿ ರೇಖೆ ಇಲ್ಲದ ಕಾರಣ ಗಡಿಯಲ್ಲಿ ಈ ರೀತಿ ಕಿತ್ತಾಟಗಳು ನಡೆಯುತಿತ್ತು. ಎರಡು ದೇಶಗಳ ಗಡಿಯನ್ನು ವಾಸ್ತವ ಗಡಿ ರೇಖೆಯಿಂದ(ಎಲ್‌ಎಸಿ – ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಗುರುತಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಗಡಿಗಳು ನಿರ್ಧಾರವಾಗಿಲ್ಲ. ಹೀಗಾಗಿ ಹಲವು ಬಾರಿ ಎರಡು ಕಡೆಯ ಸೈನಿಕರು ಗಡಿಯಲ್ಲಿ ಪಹರೆ ಕಾಯುತ್ತಿದ್ದಾಗ ಕಿತ್ತಾಟಗಳು ನಡೆಯುತ್ತಿದ್ದವು. ಎರಡು ಕಡೆಯಿಂದಲೂ ಪ್ರತಿರೋಧಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 1993, 1996ರಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದ ನಡೆಯಿತು.

1993ರ ಒಪ್ಪಂದದ ಪ್ರಕಾರ ಎಲ್‌ಎಸಿ ದಾಟಿ ಯಾರೇ ಒಳಬಂದರೂ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಪ್ರಕಾರ ಎಲ್‌ಎಸಿಯ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎರಡು ದೇಶಗಳು ಯಾವುದೇ ಸ್ಫೋಟ ನಡೆಸಬಾರದು. ಗುಂಡಿನ ದಾಳಿ ನಡೆಸಕೂಡದು ಎಂಬ ಒಪ್ಪಂದಕ್ಕೆ ಬರಲಾಗಿದೆ. ಹೀಗಾಗಿ ಭಾರತ ಚೀನಾ ಗಡಿಯಲ್ಲಿ ಸೈನಿಕರು ಈ ಒಪ್ಪಂದಕ್ಕೆ ಬದ್ಧವಾಗಿದ್ದಾರೆ. ಆದರೆ ಕಳೆದ ವಾರ ನಡೆದ ಘರ್ಷಣೆಯ ಬಳಿಕ ಭಾರತ ಗಡಿ ಒಪ್ಪಂದ ರದ್ದು ಮಾಡಿದ್ದು ಸರ್ಕಾರ ಭಾರತೀಯ ಸೇನೆಗೆ ಪೂರ್ಣ ಅಧಿಕಾರವನ್ನು ನೀಡಿದೆ.

Comments

Leave a Reply

Your email address will not be published. Required fields are marked *